ಹುಬ್ಬಳ್ಳಿ: ಇಲ್ಲಿನ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಗುರುವಾರ ಶ್ರೀರಾಮ ಸೇನಾ ಸಂಘಟನೆ ಕಾರ್ಯಕರ್ತರು ಸರಳವಾಗಿ ಕನಕದಾಸ ಜಯಂತಿ ಆಚರಿಸಿದರು. ಜೈ ಶ್ರೀರಾಮ ಘೋಷಣೆ ಹಾಕುತ್ತ ಮೈದಾನ ಪ್ರವೇಶಿಸಿದ ಕಾರ್ಯಕರ್ತರು, ಗಂಗಾಜಲ ಸಿಂಪಡಿಸಿ, ಮೈದಾನ ಶುದ್ಧೀಕರಿಸುತ್ತ ಪೆಂಡಾಲ್ ಬಳಿ ಬಂದರು. ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಪೂರ್ವ ಸಾಮೂಹಿಕವಾಗಿ ಶ್ರೀರಾಮ ಮಂತ್ರ ಪಠಿಸಿದರು. ನಂತರ ಪುನಃ ಪೆಂಡಾಲ್ ಆವರಣದಲ್ಲಿ ಗಂಗಾಜಲ ಸಿಂಪಡಿಸಿ, ಗೋಮಾತಾಕೀ ಜೈ, ಕನಕದಾಸ ಕೀ ಜೈ ಎಂದು ಘೋಷಣೆ ಕೂಗಿದರು.
ಸತ್ಯಪ್ರಮೋದೇಂದ್ರ ಸರಸ್ವತಿ ಸ್ವಾಮೀಜಿ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಂಘಟನೆ ಅಧ್ಯಕ್ಷ ಗಂಗಾಧರ ಕುಲಕರ್ಣಿ ಕಾರ್ಯಕ್ರಮದ ನೇತೃತ್ವವಹಿಸಿದ್ದರು. ಅಣ್ಣಪ್ಪ ದೀವಟಗಿ, ಮಂಜುನಾಥ ಕಾಟಗರ, ಗಣೇಶ ಕದಂ, ಬಸವರಾಜ ಗೌಡರ, ಬಸು ದುರ್ಗದ, ಪ್ರವೀಣ ಎಂ., ಮಹಾಂತೇಶ ತುಂಬಳಿ, ಚಂದ್ರು ಕೋಳೂರು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೈದಾನದಲ್ಲಿ ಜಯಂತಿ ಆಚರಣೆಗೆ ಮಹಾನಗರ ಪಾಲಿಕೆ ಷರತ್ತು ಬದ್ಧ ಅನುಮತಿ ನೀಡಿತ್ತು.
ಮುಂಜಾಗ್ರತಾ ಕ್ರಮವಾಗಿ ಮೈದಾನದಲ್ಲಿ ವಾಹನ ಪಾರ್ಕಿಂಗ್ ನಿಷೇಧಿಸಿ, ಈದ್ಗಾ ಕಾಣದಂತೆ ಮೈದಾನದ ಅರ್ಧಭಾಗ ಪರದೆ ಹಾಕಲಾಗಿತ್ತು. ಡಿಸಿಪಿ ರಾಜೀವ್ ಎಂ., ಎಸಿಪಿ ಬಲ್ಲಪ್ಪ ನಂದಗಾವಿ, ಇನ್’ಸ್ಪೆಕ್ಟರ್’ಗಳಾದ ಎಂ.ಎಸ್. ಹೂಗಾರ, ಜಾಕ್ಸನ್ ಡಿಸೋಜಾ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
‘ಸಂತಶ್ರೇಷ್ಠ ಕನಕದಾಸರ ಜಯಂತಿಯನ್ನು ಮೈದಾನದಲ್ಲಿ ಆಚರಿಸಿದ್ದೇವೆ. ಕನಕದಾಸರು ಭಕ್ತಿಯ ಮೂಲಕ, ಇಡೀ ಸಮಾಜಕ್ಕೆ ಭಗವಂತನ ರೂಪ, ವಿಶೇಷತೆಗಳನ್ನು ತಿಳಿಸಿಕೊಟ್ಟಿದ್ದಾರೆ. ಆತ್ಮದ ಅನ್ವೇಷಣೆ ಮಾಡಬೇಕು ಎಂದಾಗ, ಸಂಸಾರ ತ್ಯಜಿಸಿ ಭಗವಂತನ ಕೀರ್ತನೆ ಮಾಡುತ್ತ ಸಮಾಜ ಪರಿವರ್ತನೆಗೆ ಮುಂದಾದರು’ ಎಂದು ಶ್ರೀರಾಮಸೇನಾ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.
ನಮಾಜ್’ಗೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ: ಗಂಗಾಧರ ಕುಲಕರ್ಣಿ
ಈದ್ಗಾ ಮೈದಾನದಲ್ಲಿ ಮಹಾಪುರುಷರ ಜಯಂತಿಗೆ ಶುಲ್ಕ ವಸೂಲಿ ಮಾಡುವ ಮಹಾನಗರ ಪಾಲಿಕೆ, ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ(ನಮಾಜ್’ಗೆ)ಗೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎನ್ನುವ ಮಾಹಿತಿ ಕೇಳಬೇಕಾಗುತ್ತದೆ’ ಎಂದು ಶ್ರೀರಾಮ ಸೇನಾ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು. ಗುರುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸಾವಿರಾರು ಹಿಂದೂ ಕಾರ್ಯಕರ್ತರ ಹೋರಾಟದ ಫಲವಾಗಿ ಈದ್ಗಾ ಮೈದಾನ ಮಹಾನಗರ ಪಾಲಿಕೆಯ ಸುಪರ್ದಿಗೆ ಬಂದಿದೆ. ಜೈಲುವಾಸ, ಲಾಠಿ ಏಟು ತಿಂದು ಮೈದಾನವನ್ನು ಪಡೆದಿದ್ದೇವೆ. ಅದಕ್ಕಾಗಿ ನಾವು ಇಲ್ಲಿ ಮಹಾಪುರುಷರ ಜಯಂತಿಗಳನ್ನು ಆಚರಿಸುತ್ತೇವೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ’ ಎಂದರು.
‘ಮೈದಾನದಲ್ಲಿ ಕನಕದಾಸ ಜಯಂತಿ ಆಚರಣೆಗೆ ಅನುಮತಿ ನೀಡುವಂತೆ ಒಂದು ವಾರದ ಹಿಂದೆಯೇ ಪಾಲಿಕೆಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ನಿನ್ನೆ ರಾತ್ರಿ 9ಕ್ಕೆ ಅನುಮತಿ ನೀಡುವ ಮೂಲಕ, ಕನಕದಾಸರ ವಿಚಾರಕ್ಕೆ, ವ್ಯಕ್ತಿತ್ವಕ್ಕೆ ಅವಮಾನ ಮಾಡಿದ್ದಾರೆ. ಇನ್ನುಮುಂದೆ ಮಹಾಪುರುಷರ ಜಯಂತಿಗೆ ಯಾವುದೇ ಹಿಂದೂ ಸಂಘಟನೆ ಅರ್ಜಿ ಸಲ್ಲಿಸಿದರೂ, ತಕ್ಷಣ ಅನುಮತಿ ನೀಡಬೇಕು. ವಿಳಂಬ ಮಾಡಿದರೆ ನಾವು ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಸಿದರು.
‘ಸಾರ್ವಜನಿಕ ಕಾರ್ಯಕ್ರಮಕ್ಕೆ ಮೈದಾನ ಮುಕ್ತ ಅವಕಾಶವಿದ್ದರೂ, ಪಾಲಿಕೆ ಕನಕದಾಸ ಜಯಂತಿ ಆಚರಣೆಗೆ ₹10 ಸಾವಿರ ಶುಲ್ಕ ವಿಧಿಸಿದೆ. ಅದು ಸಹ ಎರಡು ತಾಸಿನ ಕಾರ್ಯಕ್ರಮಕ್ಕೆ. ಮಹಾಪುರುಷರ ಕಾರ್ಯಕ್ರಮಕ್ಕೆ ಇಷ್ಟೊಂದು ಹಣ ವಸೂಲು ಮಾಡುತ್ತಿರುವುದು ಅಕ್ಷಮ್ಯ. ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಗೆ ನಾಚಿಕೆಯಾಗಬೇಕು. ಮುಂಬರುವ ದಿನಗಳಲ್ಲಿ ಒಂದೇ ಒಂದು ರೂಪಾಯಿ ಸಹ ಪಡೆಯದೆ ಸಂಘಟನೆಗೆ ಮೈದಾನ ಬಿಟ್ಟುಕೊಡಬೇಕು. ನಾವು ಸಹ ಹಣ ಪಾವತಿಸದೆ ಜಯಂತಿ ಆಚರಿಸುತ್ತೇವೆ’ ಎಂದು ಹೇಳಿದರು.