ಬೆಂಗಳೂರು:- ಕಾಂಗ್ರೆಸ್ನಲ್ಲಿ ಡಿನ್ನರ್ ಮೀಟಿಂಗ್ ಆಯೋಜನೆ ಮಾಡಿರುವುದು ಭಾರೀ ಸಂಚಲನ ಮೂಡಿಸಿದೆ. ಡಿಕೆಶಿ ವಿದೇಶದಲ್ಲಿರುವಾಗಲೇ ಆಪ್ತರ ಜೊತೆ ಸಿಎಂ ಸಮಾಲೋಚನೆ ಮಾಡಿದ್ದಾರೆ.
ಮೂರು ಅಜೆಂಡಾಗಳೊಂದಿಗೆ ಬೆಳಗಾವಿಯಲ್ಲಿ ಆಪ್ತ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಅತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕುಟುಂಬ ಸದಸ್ಯರ ಜೊತೆ ವಿದೇಶದಲ್ಲಿ ಪ್ರವಾಸದಲ್ಲಿದ್ದಾರೆ. ಈ ಹೊತ್ತಿನಲ್ಲೇ ಇತ್ತ ಸಿದ್ದರಾಮಯ್ಯ ಬಣದಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ಕಾಂಗ್ರೆಸ್ ರಾಜಕೀಯ ಪಡಸಾಲೆಯಲ್ಲಿ ಕುತೂಹಲ ಮೂಡಿಸಿದೆ.
ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಗೃಹ ಸಚಿವ ಪರಮೇಶ್ವರ್, ಸಚಿವ ಹೆಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ ಪಾಲ್ಗೊಂಡಿದ್ದರು.
ಮುಂದಿನ ರಾಜಕೀಯ ಬದಲಾವಣೆಗಳ ಬಗ್ಗೆ ಡಿನ್ನರ್ ಪಾಲಿಟಿಕ್ಸ್ನಲ್ಲಿ ಭರ್ಜರಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಸಚಿವ ಸಂಪುಟ ಪುನಾರಚನೆ ಆಗಬೇಕಾ ಬೇಡ್ವಾ? ವೈಯಕ್ತಿಕವಾಗಿ ಸಂಪುಟ ಪುನಾರಚನೆ ಇಷ್ಟವಿಲ್ಲದಿದ್ದರೂ ಹೈಕಮಾಂಡ್ ಸೂಚನೆ ನೀಡಿದರೆ ಏನು ಎಂಬ ಬಗ್ಗೆ ಸಿಎಂ ಚರ್ಚೆ ನಡೆಸಿದ್ದಾರೆ. ಸಂಪುಟ ಪುನಾರಚನೆ ಅನಿವಾರ್ಯ ಆದರೆ ಹೇಗಿರಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆದಿರುವ ಸಾಧ್ಯತೆ ಇದೆ.