ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಸದಸ್ಯರ ಕಿತ್ತಾಟ ಇದೀಗ ಬೀದಿಗೆ ಬಂದಿದೆ. ಈ ಬಗ್ಗೆ ಸಂಘದ ಅಧ್ಯಕ್ಷೆ ಪದ್ಮಿನಿ ನಂದಾ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈತ್ತ ಪದ್ಮಿನಿ ನಂದಾ ಹಿರಿಯ ಕಲಾವಿದ ಡಿಂಗ್ರಿ ನಾಗರಾಜ್ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ.
‘ಸಂಘದ ಚುನಾವಣೆ ನಡೆದು ಒಂದು ವರ್ಷದ ಮೇಲೆ ಒಂದು ತಿಂಗಳು ಆಗಿದೆ. ನಾನು ಗೆದ್ದ ಮೇಲೆ ಡಿಂಗ್ರಿ ನಾಗರಾಜ್, ಆಡುಗೋಡಿ ಶ್ರೀನಿವಾಸ್ ಹಾಗೂ ದಾವಣಗೆರೆ ಸುರೇಶ್ ಅವರು ನನಗೆ ಲೆಕ್ಕಾಚಾರ ನೀಡಬೇಕಿತ್ತು. ಆದರೆ ಅವರು ಲೆಕ್ಕಾಚಾರ ಕೊಟ್ಟಿಲ್ಲ. ಲೆಕ್ಕಾಚಾರ ಕೇಳಿದ್ದಕ್ಕಾಗಿ ಅಂದಿನಿಂದ ಇಂದಿನ ತನಕ ನಮ್ಮ ಮೇಲೆ ಹಗೆ ಸಾಧಿಸಿದ್ದಾರೆ. ನಮಗೆ ಅಧಿಕಾರ ಮಾಡಲು ಬಿಡದೇ ತೊಂದರೆ ಕೊಡುತ್ತಿದ್ದಾರೆ’ ಎಂದು ಪದ್ಮಿನಿ ನಂದಾ ಆರೋಪಿಸಿದ್ದಾರೆ.
‘ಉಮೇಶ್ ಬಣಕಾರ್ ಅವರು ನನಗೆ ಆಫೀಸ್ಗೆ ಜಾಗ ನೀಡಿದ್ದರು. 8 ವರ್ಷಗಳಿಂದ ಉಚಿತವಾಗಿ ಕೊಟ್ಟಿದ್ದರು. ಖಾಲಿ ಮಾಡಬೇಕಾದ ಸಂದರ್ಭದಲ್ಲಿ ಕೆಲವರು ಸಾಮಾಗ್ರಿಗಳನ್ನು ಖಾಲಿ ಮಾಡಲು ಬಿಡಲಿಲ್ಲ. ಹೆಣ್ಣಿನ ಮುಂದೆ ಸೋತ ಕಾರಣಕ್ಕೆ ಡಿಂಗ್ರಿ ನಾಗರಾಜ್ ಅವರು ಬ್ಯಾಂಕ್ ಖಾತೆ ಹಸ್ತಾಂತರ ಮಾಡಿಲ್ಲ. ಕಲಾವಿದರಿಗೆ ಸಹಾಯ ಮಾಡಲು ಬಿಟ್ಟಿಲ್ಲ. ಮಾನಸಿಕವಾಗಿ ತುಂಬ ಹಿಂಸೆ ಕೊಡುತ್ತಿದ್ದಾರೆ. ನಮ್ಮ ಕುಟುಂಬದವರಿಗೆ ಬೈಯ್ಯುತ್ತಿದ್ದಾರೆ. ಆಫೀಸ್ ಖಾಲಿ ಮಾಡಲು ಯಾವ ಪದಾಧಿಕಾರಿಗಳೂ ಬರಲಿಲ್ಲ’ ಎಂದಿದ್ದಾರೆ.
ಕಳೆದ 6 ತಿಂಗಳಿಂದ ಬಣಕಾರ್ ಅವರು ಹೊಸ ಆಫೀಸ್ ನೀಡಿದ್ದರು. ಅಲ್ಲಿ ನಾವು ಕಾರ್ಯ ಚಟುವಟಿಕೆ ಶುರು ಮಾಡಿದ್ದೆವು. ಬೈಲಾ ಪ್ರಕಾರ 3 ಮೀಟಿಂಗ್ಗೆ ಬಾರದ ಪದಾಧಿಕಾರಿಗಳನ್ನು ತೆಗೆದುಹಾಕಿ, ಇನ್ನುಳಿದವರ ಜೊತೆ ಕೆಲಸ ಮಾಡಬೇಕು. ಇತ್ತೀಚೆಗೆ ನಾವು ವಿಶ್ವ ರಂಗಭೂಮಿ ದಿನ ಆಚರಣೆ ಮಾಡಿದೆವು. ಆ ಕಾರ್ಯಕ್ರಮಕ್ಕೆ ಗಣ್ಯರು ಆಗಮಿಸಿದ್ದರು. ಆ ಕಾರ್ಯಕ್ರಮ ಆದಾಗಿನಿಂದ ನವನೀತಾ ಹಾಗೂ ಇತರೆ ಪದಾಧಿಕಾರಿಗಳು ನನ್ನ ಮೇಲೆ ಕೇಸ್ ಹಾಕಿದ್ದಾರೆ. ನಮ್ಮ ಕಚೇರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ಪದ್ಮಿನಿ ನಂದಾ ಹೇಳಿದ್ದಾರೆ.