ನಟ ಸತೀಶ್ ನಿನಾಸಂ ಹಾಗೂ ನಟಿ ರಚಿತಾ ರಾಮ್ ಕಾಂಬಿನೇಷನ್ ನ ಅಯೋಗ್ಯ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ಅಯೋಗ್ಯ ಸಿನಿಮಾ ಇದೀಗ ಪಾರ್ಟ್ 2 ಮಾಡಲು ಮುಂದಾಗಿದೆ. ಇದೇ ಡಿ.11ರಿಂದ ಅಯೋಗ್ಯ 2 ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ನಟಿ ರಚಿತಾ ರಾಮ್ ಅವರು, ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಅಯೋಗ್ಯ-2 ಸಿನಿಮಾ ಪೋಸ್ಟರ್ ಒಂದನ್ನು ಹಂಚಿಕೊಂಡು ಸಿನಿಮಾ ಶೂಟಿಂಗ್ ಆರಂಭಿಸುವ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ನಾವೆಲ್ಲರೂ ಮತ್ತೆ ಒಟ್ಟಿಗೆ ಸೇರಿಕೊಂಡು ಅಯೋಗ್ಯ ಸಿನಿಮಾದ ಮುಂದುವರಿದ ಭಾಗವನ್ನು ನಿರ್ಮಿಸುತ್ತಿದ್ದೇವೆ. ಇದಕ್ಕೆ ನಿಮ್ಮೆಲ್ಲರ ಪ್ರೀತಿ, ಹಾರೈಕೆ ಮತ್ತು ಬೆಂಬಲ ಬೇಕು. ನಿಮ್ಮ ಆಶೀರ್ವಾದ ಸದಾ ಹೀಗೆಯೇ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಹಿಂದೆ ಅಯೋಗ್ಯ ಸಿನಿಮಾದ ಮೂಲಕ ಭರ್ಜರಿ ಹಿಟ್ ಹಾಡುಗಳನ್ನು ನೀಡಿ ಎಲ್ಲ ಬಾಯಲ್ಲಿ ಹಾಡು ಗುನುಗುವಂತೆ ಮಾಡಿದ್ದರು. ಹಿಂದೆ ಹಿಂದೆ ಹಿಂದೆ ಹೋಗು.. ಮಕ್ ಉಗುದ್ರು ಮುಂದೆ ಹೋಗು… ಹಾಗೂ ಏನಮ್ಮಿ… ಏನಮ್ಮಿ ಯಾರಮ್ಮಿ… ನೀನಮ್ಮಿ. ಆಗೋಯ್ತು ನನ್ನ ಬಾಳು… ಹೆಚ್ಚುಕಮ್ಮಿ..ಹೆಚ್ಚುಕಮ್ಮಿ… ಹಾಡು ಭರ್ಜರಿ ಪ್ರಸಿದ್ಧಿ ಆಗಿದ್ದವು. ಜೊತೆಗೆ ಏನಮ್ಮಿ .. ಏನಮ್ಮಿ ಹಾಡಿಗೆ ಡ್ಯಾನ್ಸ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿತ್ತು. ಈ ಎರಡು ಹಾಡುಗಳು ಟ್ರೆಂಡ್ ಸೃಷ್ಟಿಸಿದ್ದವು. ಇದೀಗ ಪುನಃ ಅಯೋಗ್ಯ-2 ಸಿನಿಮಾದ ಮೂಲಕ ಜನರನ್ನು ರಂಜಿಸಲು ಚಿತ್ರತಂಡ ಮತ್ತೆ ಒಂದಾಗಿದೆ.
ಅಯೋಗ್ಯ-2 ಸಿನಿಮಾವನ್ನು ಎಸ್ವಿಜಿ ಫಿಲ್ಸ್ ನಿರ್ಮಿಸುತ್ತಿದ್ದು, ಎಸ್. ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಎಂ.ಮುನೇಗೌಡ ಅವರು ನಿರ್ಮಾಪಕರಾಗಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತವಿರಲಿದೆ. ಅಯೋಗ್ಯ ಸಿನಿಮಾದಲ್ಲಿದ್ದ ಸತೀಶ್ ನಿನಾಸಂ ಹಾಗೂ ನಟಿ ರಚಿತಾರಾಮ್ ನಟಿಸಲಿದ್ದಾರೆ.