ಟೀಮ್ ಇಂಡಿಯಾದ ಯುವ ಸ್ಟಾರ್ ಆಟಗಾರರಾದ ಸರ್ಫರಾಝ್ ಖಾನ್ ಹಾಗೂ ಧ್ರುವ್ ಜುರೆಲ್ ಅವರು ಅಧಿಕೃತವಾಗಿ ಬಿಸಿಸಿಐನ ಕೇಂದ್ರ ವಾರ್ಷಿಕ ಒಪ್ಪಂದವನ್ನು ಪಡೆದುಕೊಂಡಿದ್ದಾರೆ.
ಮಾರ್ಚ್ 18( ಸೋಮವಾರ)ರಂದು ನಡೆದ ಬಿಸಿಸಿಐನ ಮಹತ್ತರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಯುವ ತಾರೆಗಳಾದ ಸರ್ಫರಾಝ್ ಖಾನ್ ಹಾಗೂ ಧ್ರುವ್ ಜುರೆಲ್ ಅವರು ಸಿ ಕೆಟಗರಿಯಲ್ಲಿ ಒಪ್ಪಂದ ಪಡೆದುಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಫೆಬ್ರವರಿ 28 ರಂದು ಬಿಸಿಸಿಐ ಕೇಂದ್ರ ಒಪ್ಪಂದವನ್ನು ಪ್ರಕಟಿಸಿದ್ದು, ಒಟ್ಟು 30 ಆಟಗಾರರು ಸ್ಥಾನ ಪಡೆದಿದ್ದರು. ಸಿ ಕೆಟಗರಿಯಲ್ಲಿ 15 ಆಟಗಾರರು ಸ್ಥಾನ ಪಡೆದಿದ್ದು, ಇಂಗ್ಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಐದನೇ ಹಾಗೂ ಅಂತಿಮ ಪಂದ್ಯದ ನಂತರ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಧ್ರುವ್ ಜುರೆಲ್ ಹಾಗೂ ಸರ್ಫರಾಝ್ ಖಾನ್ ಅವರಿಗೂ ಕೇಂದ್ರದ ಒಪ್ಪಂದವನ್ನು ನೀಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಸಿ ಕೆಟಗರಿಯಲ್ಲಿ ಗುರುತಿಸಿಕೊಂಡಿರುವ ಈ ಆಟಗಾರರು ವಾರ್ಷಿಕ ಒಂದು ಕೋಟಿ ಸಂಭಾವನೆ ಪಡೆಯಲಿದ್ದಾರೆ. ಟೆಸ್ಟ್ ಕ್ರಿಕೆಟ್ ಆಡಬೇಕೆಂಬ ತಮ್ಮ ಸುದೀರ್ಘ ಕನಸನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮೂಲಕ ಪೂರೈಸಿಕೊಂಡಿದ್ದ ಯುವ ಆಟಗಾರರು ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಮೂರು ಪಂದ್ಯಗಳಲ್ಲಿ ಅದ್ಬುತ ಪ್ರದರ್ಶನ ತೋರಿ ಬಿಸಿಸಿಐ ಗಮನ ಸೆಳೆದಿದ್ದರು.