ನವದೆಹಲಿ: ನಾನು ಮತ್ತು ಧೋನಿ (MS Dhoni) ಆತ್ಮೀಯ ಸ್ನೇಹಿತರಲ್ಲ. ನಾವು ಕ್ರಿಕೆಟ್ನಿಂದ (Cricket) ಸ್ನೇಹಿತರಾಗಿದ್ದೇವೆ ಎಂದು ಟೀಂ ಇಂಡಿಯಾದ (Team India) ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ (Yuvraj Singh) ಹೇಳಿದ್ದಾರೆ.
ಯೂಟ್ಯೂಬ್ ವಾಹಿನಿಯ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವಿಬ್ಬರು ಒಟ್ಟಾಗಿ ಆಡಿದ್ದರೂ ಮಹಿಯ ಜೀವನಶೈಲಿ ನನಗಿಂತ ತುಂಬಾ ಭಿನ್ನವಾಗಿತ್ತು, ಆದ್ದರಿಂದ ನಾವು ಎಂದಿಗೂ ಆತ್ಮೀಯ ಸ್ನೇಹಿತರಾಗಿರಲಿಲ್ಲ ಎಂದರು.
ಧೋನಿ ನಾಯಕನಾಗಿದ್ದಾಗ ನಾನು ಉಪನಾಯಕನಾಗಿದ್ದೆ. ಕೆಲವೊಮ್ಮೆ ನನಗೆ ಇಷ್ಟವಿಲ್ಲದ ನಿರ್ಧಾರಗಳನ್ನು ಅವರು ತೆಗೆದುಕೊಂಡಿದ್ದರು. ಕೆಲವೊಮ್ಮೆ ಅವರು ಇಷ್ಟಪಡದ ನಿರ್ಧಾರಗಳನ್ನು ನಾನು ತೆಗೆದುಕೊಂಡಿದ್ದೇನೆ. ಇದು ಪ್ರತಿ ತಂಡದಲ್ಲಿ ಸಂಭವಿಸುತ್ತದೆ. ನನ್ನ ವೃತ್ತಿಜೀವನದ ಕೊನೆಯಲ್ಲಿದ್ದಾಗ ನಾನು ಅವರ ಬಳಿ ಸಲಹೆ ಕೇಳಿದೆ. ಈ ವೇಳೆ ಆಯ್ಕೆ ಸಮಿತಿಯು ಈಗ ನಿನ್ನನ್ನು ಪರಿಗಣನೆ ಮಾಡುತ್ತಿಲ್ಲ ಎಂದು ಹೇಳಿದ್ದರು. 2019ರ ವಿಶ್ವಕಪ್ಗೆ ಮೊದಲೇ ನನಗೆ ಈ ವಿಷಯ ತಿಳಿದಿತ್ತು ಎಂದು ತಿಳಿಸಿದರು
ತಂಡದ ಸಹ ಆಟಗಾರರು ಒಬ್ಬರಿಗೊಬ್ಬರು ಉತ್ತಮ ಸ್ನೇಹಿತರಾಗಿರಬೇಕಾಗಿಲ್ಲ. ಆದರೆ ಮೈದಾನಕ್ಕೆ ಕಾಲಿಟ್ಟಾಗ ದೇಶಕ್ಕಾಗಿ ಅತ್ಯುತ್ತಮವಾದದ್ದನ್ನು ನೀಡಬೇಕು ಎಂದು ಯುವರಾಜ್ ಒತ್ತಿ ಹೇಳಿದರು.
ಪ್ರತಿಯೊಬ್ಬರೂ ವಿಭಿನ್ನ ಜೀವನಶೈಲಿ, ಕೌಶಲ್ಯವನ್ನು ಹೊಂದಿದ್ದಾರೆ. ಕೆಲವು ಜನರು ನಿರ್ದಿಷ್ಟ ಜನರೊಂದಿಗೆ ಹ್ಯಾಂಗ್ ಔಟ್ ಮಾಡುತ್ತಾರೆ. ನೀವು ಯಾವುದೇ ತಂಡವನ್ನು ಸೇರಿದರೆ ಎಲ್ಲಾ ಹನ್ನೊಂದು ಮಂದಿ ಹೊಂದಿಕೆಯಾಗುವುದಿಲ್ಲ. ಮೈದಾನದಲ್ಲಿದ್ದಾಗ ಅಹಂ ಬದಿಗೊತ್ತಿ ತಂಡಕ್ಕೆ ಕೊಡುಗೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಧೋನಿ ಗಾಯಗೊಂಡ ಸಂದರ್ಭದಲ್ಲಿ ನಾನು ಅವರಿಗೆ ರನ್ನರ್ ಆಗಿದ್ದೆ. ಒಂದು ಬಾರಿ ಅವರು 90 ರನ್ ಗಳಿಸಿದ್ದಾಗ ಶತಕ ಪೂರ್ಣಗೊಳಿಸಲು ನಾನು ಸ್ಟ್ರೈಕ್ ಬಿಟ್ಟುಕೊಟ್ಟಿದ್ದೆ. ವಿಶ್ವಕಪ್ ಪಂದ್ಯದಲ್ಲಿ ನಾನು ನೆದರ್ಲ್ಯಾಂಡ್ಸ್ ವಿರುದ್ಧ 48 ರನ್ ಗಳಿಸಿದ್ದೆ. ಆಗ ತಂಡ ಜಯಗಳಿಸಲು 2 ರನ್ ಬೇಕಿತ್ತು. ಈ ವೇಳೆ ಧೋನಿ ಎರಡು ಎಸೆತ ಎದುರಿಸಿಯೂ ರನ್ ಹೊಡೆಯದ ಕಾರಣ ನಾನು 50 ರನ್ ಹೊಡೆದಿದ್ದೆ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.