ಧಾರವಾಡ: ಮುಡಾ ಹಗರಣದ ತನಿಖಾ ಜವಾಬ್ದಾರಿಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಧಾರವಾಡ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರು ಇಂದು ಧಾರವಾಡ ಹೈಕೋರ್ಟ್ನಲ್ಲಿ ಕರ್ತವ್ಯ ನಿರ್ವಹಿಸಿದ್ದರಿಂದ ಈ ಅರ್ಜಿ ವಿಚಾರಣೆ ಧಾರವಾಡ ಹೈಕೋರ್ಟ್ನಲ್ಲೇ ಪೂರ್ಣಗೊಂಡಿದ್ದು, ತೀರ್ಪನ್ನು ನ್ಯಾಯಪೀಠ ಇದೀಗ ಕಾಯ್ದಿರಿಸಿದೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಟೆನ್ಶನ್ ಶುರುವಾದಂತಾಗಿದೆ.
ಸೋಮವಾರ ಬೆಳಿಗ್ಗೆ 10-30ಕ್ಕೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮಧ್ಯಾಹ್ನ 2 ಗಂಟೆಯವರೆಗೂ ಸುದೀರ್ಘ ವಿಚಾರಣೆ ನಡೆಸಿತು. ಆ ನಂತರ 2-30ರ ಸುಮಾರಿಗೆ ಮತ್ತೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ, ಸಂಜೆ 4 ಗಂಟೆಯವರೆಗೂ ವಾದ-ಪ್ರತಿವಾದ ಆಲಿಸಿ ಮುಡಾ ಹಗರಣವನ್ನು ಸಿಬಿಐ ತನಿಖೆ ವಹಿಸಬೇಕಾ ಅಥವಾ ಬೇಡವಾ ಎಂಬ ತೀರ್ಪನ್ನು ಕಾಯ್ದಿರಿಸಿತು. ಈ ತೀರ್ಪು ಯಾವಾಗ ಬೇಕಾದರೂ ಹೊರಬರಬಹುದು.
Periods: ಮಹಿಳೆಯರೇ ಗಮನಿಸಿ.. ಮುಟ್ಟಿನ ಸಮಯದಲ್ಲಿ ಮೊಸರು ತಿನ್ನಬಹುದೇ..? ಇಲ್ಲಿದೆ ಮಾಹಿತಿ
ಕೋರ್ಟ್ ಕಲಾಪದ ನಂತರ ಹೊರ ಬಂದ ಸ್ನೇಹಮಯಿ ಕೃಷ್ಣ ಮಾತನಾಡಿ, ಸಿಬಿಐಗೆ ಈ ಪ್ರಕರಣವನ್ನು ಏಕೆ ಹಸ್ತಾಂತರಿಸಬೇಕು ಎಂಬುದನ್ನು ನಮ್ಮ ವಕೀಲರು ವಾದ ಮಾಡಿದ್ದಾರೆ. ಸಿಎಂ ಪತ್ನಿ ಹಾಗೂ ಸಚಿವ ಭೈರತಿ ಸುರೇಶ ಅವರಿಗೆ ಇಡಿ ನೋಟಿಸ್ ಕೊಟ್ಟಿದೆ. ಈ ನೋಟಿಸ್ ಪ್ರಶ್ನಿಸಿ ಇವರು ಕೋರ್ಟ್ಗೆ ಹೋಗಿದ್ದ್ಯಾಕೆ? ತಪ್ಪು ಮಾಡಿಲ್ಲ ಎಂದ ಮೇಲೆ ಕೋರ್ಟ್ಗೆ ಹೋಗಬಾರದಿತ್ತು.
ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಈ ಮುಡಾ ಪ್ರಕರಣ ಸಿಬಿಐಗೆ ಹಸ್ತಾಂತರವಾಗುವುದು ಸತ್ಯ. ನ್ಯಾಯಪೀಠ ಈ ಬಗ್ಗೆ ಯಾವಾಗ ಬೇಕಾದರೂ ತೀರ್ಪು ಕೊಡಬಹುದು. 50:50 ಅನುಪಾತದಲ್ಲಿ ನಿವೇಶನದ ಆದೇಶ ಇದೆಯಾ ಎಂಬುದನ್ನು ಸರ್ಕಾರ ತಿಳಿಸಲಿ. ಎಲ್ಲಿಯೂ ಇದರ ಬಗ್ಗೆ ಉಲ್ಲೇಖವಿಲ್ಲ. ಅದನ್ನು ತೋರಿಸಿದರೆ ನಾನು ಹೋರಾಟ ನಿಲ್ಲಿಸಿ, ನಾನೇ ಜೈಲಿಗೆ ಹೋಗುತ್ತೇನೆ ಎಂದರು.
ಲೋಕಾಯುಕ್ತರು ಈಗಾಗಲೇ ಈ ಹಗರಣದ ತನಿಖೆ ನಡೆಸುತ್ತಿದೆ. ತೀರ್ಪು ಪ್ರಕಟವಾಗುವವರೆಗೂ ಲೋಕಾಯುಕ್ತ ಸಂಸ್ಥೆ ಸದ್ಯಕ್ಕೆ ಯಾವುದೇ ವರದಿ ಸಲ್ಲಿಕೆ ಮಾಡಬಾರದು ಎಂದು ಸೂಚಿಸಿರುವ ಹೈಕೋರ್ಟ್, ಸದ್ಯಕ್ಕೆ ಸಿಎಂ ಎದೆಯಲ್ಲಿ ಢವಢವ ಉಂಟು ಮಾಡುವಂತೆ ಮಾಡಿದೆ. ಈ ಪ್ರಕರಣ ಸಿಬಿಐಗೆ ಹಸ್ತಾಂತರ ಆಗೇ ಆಗುತ್ತದೆ ಎಂದು ಸ್ನೇಹಮಯಿ ಕೃಷ್ಣ ಪರ ವಕೀಲರು ವಿಶ್ವಾಸ ವ್ಯಕ್ತಪಡಿಸಿದರು.
ಒಟ್ಟಾರೆ ಧಾರವಾಡ ಹೈಕೋರ್ಟ್ ಸೋಮವಾರ ಮುಡಾ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದೆ. ಸಿಎಂ ಸಿದ್ದರಾಮಯ್ಯ ಪರ ಅಭಿಷೇಕ ಮನು ಸಿಂಘ್ವಿ, ರಾಜ್ಯ ಸರ್ಕಾರದ ಪರ ವಿಶೇಷ ಪ್ರತಿನಿಧಿಯಾಗಿ ಕಪಿಲ್ ಸಿಬಲ್, ವಿವಾದಿತ ನಿವೇಶನದ ಮೂಲ ಮಾಲೀಕರ ಜೆ.ದೇವರಾಜ ಪರ ದುಷ್ಯಂತ ಧವೆ ಹಾಗೂ ಸ್ನೇಹಮಯಿ ಕೃಷ್ಣ ಅವರ ಪರವಾಗಿ ಮಣಿಂದರ್ ಸಿಂಗ್ ವಾದ ಮಂಡಿಸಿದರು.