ಬೆಂಗಳೂರು: ಗೋಲ್ಡ್ ಲೇಡಿ ಐಶ್ವರ್ಯಗೌಡ ಚೀಟಿಂಗ್ ಕೇಸಲ್ಲಿ ನಟ ಧರ್ಮನಿಗೆ ಧರ್ಮಸಂಕಟ ಎದುರಾಗಿದೆ. ಮಾಜಿ ಸಂಸದ ಡಿ ಕೆ ಸುರೇಶ್ ಹೆಸರಲ್ಲಿ ಫೋನ್ ಮಾಡಿ ಬೆದರಿಸಿದ್ದ ಧರ್ಮೇಂದ್ರನಿಗೆ ಬಂಧನದ ಭೀತಿ ಎದುರಾಗಿದ್ದು, ಖಾಕಿ ಪಡೆ ನಟನಿಗೆ ಶೋಧ ಕೈಗೊಂಡಿದ್ದಾರೆ. ಆದ್ರೆ ಈ ನಡುವೆ ಐಶ್ವರ್ಯಳಾ ಇನ್ನಷ್ಟು ಕಹಾನಿಗಳು ಹೊರ ಬರ್ತಾ ಇದ್ದು, ಉದ್ಯಮಿಯೊಬ್ಬ ದೂರು ದಾಖಲು ಮಾಡುವುದಾಗಿ ಹೇಳಿಕೊಂಡಿದ್ದಾರೆ. ಐಶ್ವರ್ಯ ಚೀಟಿಂಗ್ ಹಿಸ್ಟರಿಯ ಕಂಪ್ಲೀಟ್ ಕಹಾನಿ ಇಲ್ಲಿದೆ.
ಜ್ಯೂವೆಲ್ಲರಿ ಶಾಪ್ ಮಾಲೀಕರಿಗೆ ವಂಚಿಸಿದ ಆರೋಪದಲ್ಲಿ ಗೋಲ್ಡ್ ಲೇಡಿ ಐಶ್ವರ್ಯ ಮತ್ತು ಆಕೆಯ ಗಂಡ ಹರೀಶನನ್ನ ಚಂದ್ರ ಲೇಔಟ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಅದ್ರೆ ಇದೇ ಕೇಸಲ್ಲಿ ಬೆದರಿಕೆ ಹಾಕಿದ ಆರೋಪದಲ್ಲಿ ಸಿಲುಕಿದ ನಟ ಧರ್ಮೇಂದ್ರನಿಗೆ ಈಗ ಧರ್ಮಸಂಕಟ ಎದುರಾಗಿದೆ. ವರಾಹೀ ಜ್ಯುವೆಲ್ಲರಿ ಶಾಪ್ ಮಾಲೀಕರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ಧರ್ಮೇಂದ್ರನ ಮೇಲೂ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿದ್ದು, ಈಗ ಬಂಧನಕ್ಕಾಗಿ ತಲಾಷ್ ನಡೆಸಿದ್ದಾರೆ. ಬಂಧನದ ಭೀತಿ ಎದುರಿಸುತ್ತಿರುವ ಧರ್ಮೇಂದ್ರ ನಿನ್ನೆಯಿಂದ ಪೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಇನ್ನು ಐಶ್ವರ್ಯ ಗೌಡ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಹತ್ತಕ್ಕೂ ಹೆಚ್ಚು ಆಡಿಯೋ ತುಣುಕುಗಳನ್ನ ಸಂಗ್ರಹಿಸಿದ್ದಾರೆ. ಆರೋಪಿ ಐಶ್ವರ್ಯಗೌಡ ಹಾಗೂ ವನಿತಾ ಐತಾಳ್ ಹಾಗೂ ಧರ್ಮೇಂದ್ರ ನಡುವಿನ ಸಂಭಾಷಣೆಯ ಆಡಿಯೋ ಸಂಗ್ರಹಿಸಿದ್ದು, ಶೀಘ್ರದಲ್ಲೆ ಆಡಿಯೋ ತುಣುಕು ಮತ್ತು ವಾಯ್ಸ್ ಸ್ಯಾಂಪಲ್ ಗಳನ್ನ ಎಫ್ಎಸ್ಎಲ್ ಗೆ ಕಳುಹಿಸಲು ಪೊಲೀಸರು ತಯಾರಿ ನಡೆಸಿದ್ದಾರೆ. ಪ್ರಕರಣದಲ್ಲಿ ಆಡಿಯೋ ಕ್ಲಿಪ್ ಗಳು ಮಹತ್ವದ ಸಾಕ್ಷ್ಯಗಳಾಗಿದ್ದು, ಎಫ್ಎಸ್ಎಲ್ ನಿಂದ ಅಧಿಕೃತ ವರದಿ ಪಡೆಯಲು ಪೊಲೀಸರು ನಿರ್ಧರಿಸಿದ್ದಾರೆ.
ಇನ್ನು ಒಂದು ಪ್ರಕರಣದ ತನಿಖೆ ನಡೆಯುತ್ತಿರುವ ಹೊತ್ತಲ್ಲೆ ಐಶ್ವರ್ಯಗೌಡ ವಿರುದ್ದ ಮತ್ತೊಂದು ವಂಚನೆ ಆರೋಪ ಕೇಳಿ ಬಂದಿದೆ. ಉದ್ಯಮಿ ಸೋನು ಲಂಬಾಣಿ ಎಂಬುವವರಿಗೆ ವಂಚಿಸಿದ ಆರೋಪ ಕೇಳಿ ಬಂದಿದ್ದು, ಜೆಪಿ ನಗರ ಠಾಣೆಗೆ ದೂರು ನೀಡಲು ಉದ್ಯಮಿ ನಿರ್ಧರಿಸಿದ್ದಾರೆ. ಸೋನು ಲಂಬಾಣಿಗೆ ಐದೂವರೆ ಕೋಟಿ ವಂಚನೆ ಮಾಡಿದ ಆರೋಪ ಕೇಳಿ ಬಂದಿದ್ದು, ದಾಖಲಾತಿ ಸಮೇತ ದೂರು ನೀಡೋದಾಗಿ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಈ ನಡುವೆ ನಟ ಧರ್ಮ ಮಾತನಾಡಿರುವ ಮತ್ತಷ್ಟು
ಆಡಿಯೋ ತುಣುಕುಗಳು ಹೊರ ಬರ್ತಿವೆ. ಮಾಜಿ ಸಂಸದ ಡಿ.ಕೆ.ಸುರೇಶ್ ಧ್ವನಿಯಲ್ಲಿ ಶ್ರೇಯಸ್ ಎಂಬಾತನ ಜೊತೆ ಧರ್ಮ ಮಾತನಾಡಿದ್ದಾನೆ ಎನ್ನಲಾದ ಆಡಿಯೋಗಳು ಬೆಳಕಿಗೆ ಬರ್ತಿವೆ. ಹಣಕಾಸು ವ್ಯವಹಾರ, ರಸ್ತೆ ಕಾಮಗಾರಿಗಳ ಬಗ್ಗೆ ಮಾತನಾಡಿದ್ದು, ಇದನ್ನ ಕೂಡ ಪೊಲೀಸರಿಗೆ ನೀಡಿ ತನಿಖೆಗೆ ಸೂಚಿಸಲಾಗಿದೆ.
ಒಟ್ನಲ್ಲಿ ಗೋಲ್ಡ್ ಲೇಡಿ ಐಶ್ವರ್ಯ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಆರೋಪ ಪ್ರತ್ಯಾರೋಪಗಳ ಜೊತೆಗೆ ಆಡಿಯೋ, ವಿಡಿಯೋ ಕ್ಲಿಪ್ ಗಳು ಹೊರ ಬರ್ತಿದ್ದು, ಪೊಲೀಸರು ಇದರ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಅಸಲಿ ಸತ್ಯ ಹೊರ ತೆಗೆಯಬೇಕಿದೆ