ಒಡಿಶಾ : ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುಟುಕಿದರು.
ಒಡಿಶಾದ ಜಾರಸುಗುಡದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಮಾತನಾಡಿದ ಅವರು, ಮೋದಿಯವರು ಹಿಂದುಳಿದ ವರ್ಗದ ಕುಟುಂಬದಲ್ಲಿ ಹುಟ್ಟಿದ್ದೇನೆ ಎಂದು ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ತೇಲಿ ಜಾತಿಯಲ್ಲಿ ಹುಟ್ಟಿದರು. 2000ನೇ ಇಸ್ವಿಯಲ್ಲಿ ಗುಜರಾತ್ನಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸಲಾಯಿತು. ಆದ್ದರಿಂದ ಮೋದಿ ಹುಟ್ಟಿನಿಂದ ಒಬಿಸಿಯಲ್ಲ. ಈ ಕಾರಣಕ್ಕೆ ಮೋದಿ ಒಬಿಸಿಗಳೊಂದಿಗೆ ಕೈ ಕುಲುಕುವುದಿಲ್ಲ, ಕೋಟ್ಯಾಧಿಪತಿಗಳನ್ನು ತಬ್ಬಿಕೊಳ್ಳುತ್ತಾರೆ ಎಂದು ಕುಹಕವಾಡಿದರು.
ಸಾಮಾನ್ಯ ಜಾತಿಗೆ ಸೇರಿದ ಕುಟುಂಬದಲ್ಲಿ ಪ್ರಧಾನಿ ಮೋದಿ ಜನಿಸಿದ್ದಾರೆ. ಒಬಿಸಿಯಲ್ಲಿ ಜನಿಸದ ಕಾರಣ ಮೋದಿ ತಮ್ಮ ಇಡೀ ಜೀವನದಲ್ಲಿ ಜಾತಿ ಗಣತಿಯನ್ನು ನಡೆಸಲು ಬಿಡುವುದಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.