ದೇವನಹಳ್ಳಿ:- ನಾನು ಹೇಳಿದ್ದನ್ನೇ ಮಾಡುತ್ತೇನೆ, ಮಾಡಿದ್ದನ್ನೇ ಹೇಳುತ್ತೇನೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಾನು ಹೇಳುವುದನ್ನೇ ಮಾಡುತ್ತೇನೆ, ಮಾಡಿದ್ದನ್ನೇ ಹೇಳುತ್ತೇನೆ. ತಮ್ಮೆಲ್ಲದ ಆಶೀರ್ವಾದದಿಂದ ನಾನಿಂದು ಶಾಸಕನಾಗಿ ಆಯ್ಕೆಗೊಂಡು ಸಚಿವನಾಗಿದ್ದೇನೆ. ಕ್ಷೇತ್ರದ ಜನರ ಋುಣ ನನ್ನ ಮೇಲಿದ್ದು, ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಇಲ್ಲಿನ ಚಿಕ್ಕಕೆರೆ ಅಭಿವೃದ್ಧಿಗಾಗಿ 9.5 ಕೋಟಿ ರು., ಆಕಾಶ್ ಇಂಟರ್ ನ್ಯಾಷನಲ್ ಶಾಲೆಯಿಂದ ನಂದಿ ಉಪಚಾರ್ವರೆಗೂ ಡಬಲ್ ರೋಡ್ ಮಾಡಲು 20 ಕೋಟಿ ರು., ಪುರಸಭೆ ವ್ಯಾಪ್ತಿಯ ಎಲ್ಲ ರಸ್ತೆಗಳು ಕಾಂಕ್ರೀಟ್ ರಸ್ತೆ ಅಭಿವೃದ್ಧಿ 140 ಕೋಟಿ ರು., ಪಾರಿವಾಳ ಗುಟ್ಟದಲ್ಲಿ ಟ್ಯಾಂಕ್ ನಿರ್ಮಿಸಿ ಅಲ್ಲಿಂದ ಪಟ್ಟಣದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಒಟ್ಟಾರೆ ಪಟ್ಟಣದ ಅಭಿವೃದ್ಧಿಗಾಗಿ 220 ಕೋಟಿ ರು. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಪುರಸಭಾ ಸದಸ್ಯ ಎಸ್. ಸಿ. ಚಂದ್ರಪ್ಪ ಮನವಿಯಂತೆ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬರಲಿರುವ ಮೆಟ್ರೋ ರೈಲು ದೇವನಹಳ್ಳಿವರೆಗೂ ವಿಸ್ತರಣೆ ಅಲ್ಲದೆ ಕಾವೇರಿ ನೀರು ಹರಿಸುವ ಬಗ್ಗೆ ಸಚಿವರು ಮಾತನಾಡಿ ಮುಖ್ಯಮಂತ್ರಿಗಳಲ್ಲಿ ಮಾತನಾಡುವ ಭರವಸೆ ನೀಡಿದರು.