ಕಲಬುರ್ಗಿ:- ಆಳುವ ಸರ್ಕಾರವಲ್ಲ, ನಮ್ಮದು ಆಲಿಸುವ ಸರ್ಕಾರ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆಗ್ರಹಿಸಿ ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆಯ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿನಿರತ ನೂರಾರು ಮಹಿಳೆಯರ ಅಹವಾಲು ಆಲಿಸಿ ಅವರು ಮಾತನಾಡಿದರು.
ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ. ನಿಮ್ಮ ಸಲಹೆ, ಸೂಚನೆಗಳನ್ನು ಕೇಳಲಿಕ್ಕೆ ಸರ್ಕಾರದ ಬಾಗಿಲು ಸದಾ ತೆರೆದಿದೆ’ ಎಂದರು.
371(ಜೆ) ಕಾಯ್ದೆ ಅನುಷ್ಠಾನದ ಉಪ ಸಮಿತಿಯ ಅಧ್ಯಕ್ಷ ನಾನೇ ಇರುವೆ. ಎಲ್ಲ ಇಲ್ಲಾಖೆಗಳಲ್ಲಿ ಎಲ್ಲಿ ಮುಂಬಡ್ತಿ ಸಿಗಬೇಕು. ಎಲ್ಲಿ ಖಾಲಿ ಹುದ್ದೆಗಳ ಭರ್ತಿ ಆಗಬೇಕು. ಅದೆಲ್ಲವನ್ನೂ ಒಂದು ವರ್ಷದಲ್ಲಿ ತುಂಬಲು ತೀರ್ಮಾನಿಸಿದ್ದೇವೆ. ಇವೆಲ್ಲ ನೀತಿ ನಿರೂಪಣೆ ಕಾರ್ಯಗಳಾಗಿದ್ದು, ತುಸು ವಿಳಂಬ ಆಗುತ್ತದೆ. ಅದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮೊಟ್ಟಮೊದಲ ಬಾರಿಗೆ ಕೆಕೆಆರ್ಡಿಬಿಯಿಂದ ಶಿಕ್ಷಣ ಇಲಾಖೆಗೆ ಹೊರಗುತ್ತಿಗೆ ಆಧಾರದಲ್ಲಿ ಮಾನವ ಸಂಪನ್ಮೂಲ ತೆಗೆದುಕೊಳ್ಳಲಾಗಿದೆ’ ಎಂದರು.
ಮಾದರಿ ಶಾಲೆ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್, ‘ಕಲಬುರಗಿ ಜಿಲ್ಲೆಯ ಎಲ್ಲಾ ಶಾಲೆಗಳ ಮೂಲಸೌಕರ್ಯದ ಆಡಿಟ್ ಅನ್ನು ಎರಡ್ಮೂರು ತಿಂಗಳಲ್ಲಿ ಮಾಡಿಸುವೆ. ಶಾಲೆಗಳ ಅಭಿವೃದ್ಧಿಗೆ ಬೇಕಾಗುವ ಅಗತ್ಯ ಅನುದಾನ ಒದಗಿಸಿ, 2 ವರ್ಷಗಳಲ್ಲಿ ಅವುಗಳನ್ನು ಮಾದರಿ ಶಾಲೆಯಾಗಿ ಅಭಿವೃದ್ಧಿಪಡಿಸಲಾಗುವುದು. ಕಲ್ಯಾಣ ಭಾಗದ ಇತರ ಜಿಲ್ಲೆಗಳಲ್ಲೂ ಇದನ್ನು ಹೇಗೆ ಕಾರ್ಯರೂಪಕ್ಕೆ ತರಬಹುದು ಎಂಬುದರ ಬಗ್ಗೆ ಕೆಕೆಆರ್ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಅವರೊಂದಿಗೂ ಚರ್ಚಿಸುವೆ’ ಎಂದು ಹೇಳಿದರು.
‘ನಾನು ಸುಳ್ಳು ಹೇಳುವ ವ್ಯಕ್ತಿಯಲ್ಲ. ಆಗುವುದಾದರೆ ಆಗುತ್ತೆ ಅಂತೀನಿ. ಆಗದಿದ್ದರೆ, ಕೈಜೋಡಿಸಿ ಕ್ಷಮೆ ಕೇಳ್ತಿನಿ. ಹೀಗಾಗಿ ನಿಮ್ಮ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಲಾಗುವುದು. ದಯವಿಟ್ಟು, ಈಗ ಧರಣಿ ಕೈಬಿಡಿ’ ಎಂದು ಕೋರಿದರು.