ಕೋಲಾರ:- ರಾಜ್ಯ ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದೆ ಸಂಸದ ಮುನಿಸ್ವಾಮಿ ಆರೋಪ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕಳೆದ 5 ತಿಂಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದೆ. ರಾಜ್ಯದಲ್ಲಿ ಅಭಿವೃದ್ಧಿ ಎಂಬುವುದು ಸಂಪೂರ್ಣವಾಗಿ ವಿಫಲವಾಗಿದೆ, ರಾಜ್ಯದಲ್ಲಿ ಭೀಕರ ಬರಗಾಲ ವ್ಯಾಪಿಸಿದ್ದು ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಜಿಲ್ಲೆಯ ಉಸ್ತುವಾರಿ ಸಚಿವರು ಬರ ಅಧ್ಯಯನಕ್ಕೆ ಯಾವೂದೇ ತಾಲೂಕಿಗೂ ಭೇಟಿ ನೀಡಿಲ್ಲ, ಬರಪರಿಹಾರಕ್ಕೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರವು ಹಣ ವಸೂಲಾತಿಯಲ್ಲಿ ತೊಡಗಿದೆ. ಕೆಎಂಎಫ್ ಕಟ್ಟಡಕ್ಕೆ ಹಣ ಬಿಡುಗಡೆ ಮಾಡಿದರೆ ತಮ್ಮ ಕುಟುಂಬದವರನ್ನು ಕರೆದುಕೊಂಡು ವಿದೇಶಗಳಲ್ಲಿ ಮೋಜುಮಸ್ತಿ ಮಾಡಲು ಹೋಗಿದ್ದಾರೆ. ಕೆ.ಎಂ.ಎಫ್ ಆಡಳಿತ ಮಂಡಳಿಯು ಹಾಲು ಉತ್ಪಾದಕರ ಸಮಸ್ಯೆಗಳಿಗೆ ಸ್ಪಂದಿಸದೆ ಹೊಟ್ಟೆಯ ಮೇಲೆ ಬರೆ ಎಳೆದಿದೆ ಎಂದರು.
ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುವ ಮೂಲಕ ಗ್ಯಾರಂಟಿ ಯೋಜನೆಗಳ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದೆ, ಕಳೆದ ಬಿಜೆಪಿ ಆಡಳಿತದಲ್ಲಿನ ಅಭಿವೃದ್ದಿ ಯೋಜನೆಗಳನ್ನು ರಾಜ್ಯ ಸರ್ಕಾರ ತಾನು ಮಾಡಿದಂತೆ ಬಿಂಬಿಸಲು ಜೇಬಿನಲ್ಲಿ ಕತ್ತರಿ ಇಟ್ಟುಕೊಂಡು ಟೇಪುಗಳನ್ನು ಕತ್ತರಿಸುವ ಮೂಲಕ ಪ್ರಚಾರ ಗಿಟ್ಟಿಸುತ್ತಿದೆ ಎಂದು ದೂರಿದರು