ವಿಜಯಪುರ : ವಿಜಯಪುರ ಜಿಲ್ಲೆಯ ರೈತರ ವಿರೋಧದ ಮಧ್ಯೆಯೂ ತೆಲಂಗಾಣ ರಾಜ್ಯಕ್ಕೆ ರಾತ್ರೋರಾತ್ರಿ ನೀರು ಬಿಡುಗಡೆ ಮಾಡಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಆಲಮಟ್ಟಿ ಜಲಾಶಯದಿಂದ ತೆಲಂಗಾಣಕ್ಕೆ ಸುಮಾರು 1.27 ಟಿಎಂಸಿ ಬಿಡುಗಡೆ ಮಾಡಲಾಗಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ ಕೃಷಿ ಮತ್ತು ಕುಡಿಯುವ ನೀರು ಉದ್ದೇಶಕ್ಕಾಗಿ 5 ಟಿಎಂಸಿ ನೀರು ಬಿಡುಗಡೆಗಾಗಿ ಕರ್ನಾಟಕ ಸರ್ಕಾರಕ್ಕೆ ತೆಲಂಗಾಣ ಸರ್ಕಾರ ಪತ್ರ ಬರೆದಿತ್ತು. ಜಲಸಂಪನ್ಮೂಲ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಜುರಾಲಾ ಜಲಾಶಯಕ್ಕೆ ನೀರು ಬಿಡುಗಡೆಗೆ ಮನವಿ ಮಾಡಿತ್ತು. ಆದರೆ ವಿಜಯಪುರ ರೈತರು ಆಲಮಟ್ಟಿ ಜಲಾಶಯದಿಂದ ತೆಲಂಗಾಣ ರಾಜ್ಯಕ್ಕೆ ನೀರು ಬಿಡುಗಡೆಗೆ ವಿರೋಧಿಸಿರು. ಆದರೆ ಇದೀಗ ರೈತರ ವಿರೋಧದ ಮಧ್ಯೆಯೂ ತೆಲಂಗಾಣಕ್ಕೆ ನೀರು ಬಿಡಲಾಗಿದ್ದು, ರಾಜ್ಯ ಸರ್ಕಾರದ ನಡೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್ ಮೂಲದ ಯಾತ್ರಿಕರ ವಾಹನ ಅಪಘಾತ ಪ್ರಕರಣ ; ಗಾಯಾಳುಗಳ ಭೇಟಿಯಾದ ಸಚಿವ ಖಂಡ್ರೆ
ಇನ್ನೂ ತೆಲಂಗಾಣ ರಾಜ್ಯಕ್ಕೆ ನೀರು ಬಿಡುಗಡೆ ಮಾಡಿರೋದನ್ನ ಸಚಿವ ಶಿವಾನಂದ ಪಾಟೀಲ ಸಮರ್ಥಿಸಿಕೊಂಡಿದ್ದಾರೆ. ಕುಡಿಯುವ ನೀರಿನ ವಿಚಾರದಲ್ಲಿ ಯಾರು ರಾಜಕಾರಣ ಮಾಡಬಾರದು. ನಮ್ಮಲ್ಲಿ ಹೆಚ್ಚು ನೀರಿದ್ರೆ ಕೊಡುವುದರಲ್ಲಿ ತಪ್ಪೇನಿಲ್ಲ. ಪ್ರತಿವರ್ಷಕ್ಕಿಂತ ಈ ವರ್ಷ ಮಳೆ ಹೆಚ್ಚಾಗಿದೆ. ನೀರು ಹೆಚ್ಚಿದೆ, ಈಗಿರುವ ನಮ್ಮ ಬೆಳೆಗೆ ಮಾರ್ಚ್ ಅಂತ್ಯದವರಿಗೆ ಕೊಡುತ್ತಾರೆ. ಮಾರ್ಚ್ ನಂತರ ಕುಡಿಯೋ ನೀರಿ ಇಟ್ಟುಕೊಂಡು ಮಾನವೀಯತೆ ದೃಷ್ಟಿಯಿಂದ ನೀರು ಕೊಡುವುದಲ್ಲಿ ತಪ್ಪೇನಿಲ್ಲ. ನಮಗೆ ಕಷ್ಟ ಇದ್ದಾಗ ಕೊಯ್ನಾ ಜಲಾಶಯದಿಂದ ಒಮ್ಮೆ ದುಡ್ಡು ಕೊಟ್ಟು ಹಾಗೂ ಮಾನವೀಯತೆ ದೃಷ್ಟಿಯಿಂದ ನೀರು ಬಿಡಿಸಿಕೊಂಡಿದ್ದೇವೆ. ಅಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಅಂತ ನೀರು ಬಿಡುಗಡೆ ಮಾಡ್ತಾರೆ ಅನ್ನೋದು ತಪ್ಪು ಎಂದಿದ್ದಾರೆ.
ಇನ್ನೂ ಶಿವಾನಂದ ಪಾಟೀಲ್ ಅವರ ಹೇಳಿಕೆಗೆ ರೈತ ಸಂಘದ ಅರವಿಂದ್ ಕುಲಕರ್ಣಿ ಕಿಡಿಕಾರಿದ್ದು, ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯ ರೈತರು ಆಲಮಟ್ಟಿ ಜಲಾಶಯಕ್ಕೆ ಭೂಮಿ ತ್ಯಾಗ ಮಾಡಿದ್ದಾರೆ. ಆಲಮಟ್ಟಿ ಜಲಾಶಯ ಮಟ್ಟ ಏರಿಕೆ ವಿಚಾರದಲ್ಲಿ ತೆಲಂಗಾಣ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದೆ. ರಿಟ್ ಅರ್ಜಿ ವಾಪಸ್ ಪಡೆಯಲಿ. ಬೇಸಿಗೆ ಮುನ್ನವೇ ಆಲಮಟ್ಟಿ ಜಲಾಶಯದಲ್ಲಿನ ನೀರು ಬರಿದಾಗುತ್ತಿದೆ. ನಮಗೆ ನೀರು ಸಾಕಾಗುವುದಿಲ್ಲ ಈಗ ನೀರು ಬಿಟ್ಟರೆ ಹೇಗೆ. ಸದ್ಯ ಆಲಮಟ್ಟಿ ಜಲಾಶಯದಲ್ಲಿ 51ಟಿಎಂಸಿ ನೀರಿದೆ.ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆಗುವ ಆತಂಕವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.