ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ 7 ತಿಂಗಳಿನಿಂದ ಜೈಲಿನ ಗೋಡೆಗಳ ಮಧ್ಯೆ ಬಂಧಿಯಾಗಿದ್ದ ಪವಿತ್ರಾ ಗೌಡ ಇಂದು ಮನೆ ಸೇರುತ್ತಿದ್ದಾರೆ. ಪವಿತ್ರಾ ಗೌಡಗೆ ಶುಕ್ರವಾರವೇ ಜಾಮೀನು ಸಿಕ್ಕಿದೆ. ಆದರೆ ವೀಕೆಂಡ್ ಆದ ಕಾರಣ ಹೊರ ಬರಲು ಸಾಧ್ಯವಾಗಲಿಲ್ಲ. ಸೋಮವಾರ ಜಾಮೀನು ಪ್ರತಿ ತಡವಾಗಿ ಜೈಲಧಿಕಾರಿಗಳ ಕೈಸೇರಿದ ಹಿನ್ನೆಲೆಯಲ್ಲಿ ಆರೋಪಿ ಪವಿತ್ರಾ ಗೌಡ ಇಂದು ಜೈಲಿನಿಂದ ಹೊರ ಬರುವ ಸಾಧ್ಯತೆ ಇದೆ.
ಕೇಂದ್ರ ಕಾರಾಗೃಹಕ್ಕೆ ಜಾಮೀನು ಪ್ರತಿ ತಡವಾಗಿ ತಲುಪಿದೆ. ಜಾಮೀನು ಪ್ರತಿಗಾಗಿ ಪವಿತ್ರಾ ಗೌಡ ಕಾದು ಕುಳಿತಿದ್ದರು. ಸಂಜೆ 6 ಗಂಟೆ ಒಳಗೆ ಬರಬೇಕಿದ್ದ ಜಾಮೀನು ಪ್ರತಿ ತಡವಾಗಿ ತಲುಪಿದ ಪರಿಣಾಮ ಸೋಮವಾರವೇ ಜೈಲಿನಲ್ಲೇ ಕಳೆದರು. ಇಂದು ಪವಿತ್ರಾ ಗೌಡ ಮನೆ ಸೇರುವ ಸಾಧ್ಯತೆ ದಟ್ಟವಾಗಿದೆ.
ಪ್ರಕರಣದ ಇತರೆ ಆರೋಪಿಗಳಾದ ಪ್ರದೋಷ್, ಲಕ್ಷ್ಮಣ್ ಜಾಮೀನಿನ ಪ್ರಕ್ರಿಯೆಗಳನ್ನು ಮುಗಿಸಿದರು. ಕಲಬುರಗಿ ಜೈಲಿಂದ ನಾಗರಾಜ್ ರಿಲೀಸ್ ಆದರು. ಆದರೆ, ಆದೇಶ ಪ್ರತಿ ಜೈಲು ತಲುಪಲು ವಿಳಂಬವಾದ ಕಾರಣ ಉಳಿದ ಮೂವರು ಇಂದು ಬೆಳಗ್ಗೆ ರಿಲೀಸ್ ಆಗಲಿದ್ದಾರೆ. ಜಗದೀಶ್ ಮತ್ತು ಅನುಕುಮಾರ್ಗೆ ಶ್ಯೂರಿಟಿ ಹಾಕುವವರು ಸಿಗದ ಕಾರಣ ಅವರ ಬಿಡುಗಡೆ ಪ್ರಕ್ರಿಯೆ ವಿಳಂಬವಾಗಿದೆ. ಈ ಮಧ್ಯೆ, ಜೈಲಲ್ಲಿರುವ ಪವನ್, ನಂದೀಶ್ ಮತ್ತು ರಾಘವೇಂದ್ರ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.