ಬೆಂಗಳೂರು:– ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾಗಿ ಈ ಹಿಂದೆ ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜು ವಿರುದ್ಧ ಜಿಲ್ಲಾ ಕಚೇರಿ ಸಿಬ್ಬಂದಿಗೆ ಹಾಗೂ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಕಿರುಕುಳ, ಮಾನಸಿಕ ಹಿಂಸೆ, ಮಹಿಳಾ ಸಿಬ್ಬಂದಿ ಜೊತೆ ದುರ್ನಡತೆ, ದಬ್ಬಾಳಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿಬಂದಿದ್ದು, ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ.
ಅಲ್ಲದೇ ಕಚೇರಿ ಸಮಯ ಮುಗಿದ ನಂತರವೂ ಅವಶ್ಯಕತೆ ಇಲ್ಲದಿದ್ದರೂ ಮಹಿಳಾ ಸಿಬ್ಬಂದಿಯನ್ನು ರಾತ್ರಿ 8-9 ಗಂಟೆವರೆಗೆ ಕಚೇರಿಯಲ್ಲಿ ಉಳಿಯುವಂತೆ ಆದೇಶಿಸಿದ್ದರು. ಮನೆಗೆ ಹೋದ ಬಳಿಕವೂ ಸಿಬ್ಬಂದಿಗೆ ರಾತ್ರಿ 10-11 ಗಂಟೆಗೆ ಕರೆ ಮಾಡಿ ಕೆಲಸ ಹೇಳುತ್ತಿದ್ದರು. ಇಲಾಖೆಯ ಕಾರ್ಯಕ್ರಮ ನಡೆಯುತ್ತಿದ್ದಾಗ ಬೇರೆ ಇಲಾಖೆ ಅಧಿಕಾರಿಗಳ ಎದುರಿಗೆ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿಯನ್ನು ಕೆಟ್ಟ ಶಬ್ದಗಳಿಂದ ಬೈದು ಅವಮಾನಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಸಿಬ್ಬಂದಿಗೆ ಯೋಗ್ಯತೆ ಇಲ್ಲ, ದನ ಕಾಯೋನು, ಯೂಸ್ ಲೆಸ್ ಫೆಲೋ, ಕತ್ತೆ ಮೇಯಿಸೋಕೆ ಹೋಗಿ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಕಾಲಕಾಲಕ್ಕೆ ಕಡತಗಳನ್ನು ಸಿಬ್ಬಂದಿ ತಯಾರಿಸಿಕೊಟ್ಟರೂ ಮೇಲಾಧಿಕಾರಿಗಳ ಬಳಿ ಹೋಗಿ ಕಡತಕ್ಕೆ ಸಹಿ ಹಾಕಿಸಿಕೊಂಡು ಬರದೆ ಕೆಲಸದಲ್ಲಿ ವಿಳಂಬ ಧೋರಣೆ ಅನುಸರಿಸುತ್ತ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ಬಸವರಾಜು ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ರಶ್ಮಿ, ಎಂ. ಎಸ್ ಬಸವರಾಜು ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.