ಚಾಮರಾಜನಗರ:– ಪುಣಜನೂರು ಸ್ಟೇಟ್ ಫಾರೆಸ್ಟ್ನಲ್ಲಿ ವ್ಯವಸಾಯ ಮಾಡಲು ತೊಂದರೆ ಕೊಡುತ್ತಿರುವ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಕ್ರಮವನ್ನು ವಿರೋಧಿಸಿ ದಸಂಸ ಪದಾಧಿಕಾರಿಗಳು ಮತ್ತು ನಗರದ ಅಂಬೇಡ್ಕರ್ ಬಡಾವಣೆಯ ನಿವಾಸಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಪ್ರತಿಭಟನಾಕಾರರು ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ವಿರುದ್ಧ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಅವರ ಹಾಕಿದರು.
ಚಾಮರಾಜನಗರ ತಾಲೂಕಿನ ಎಚ್.ಡಿ.ಫಾರೆಸ್ಟ್ ಪುಣಜನೂರು ಸ್ಟೇಟ್ ಫಾರೆಸ್ಟ್ನ ಸ.ನಂ. 1. 3. 5ರಲ್ಲಿ ಸುಮಾರು 150 ಜನರಿಗೆ ಸೇರಿದ ಜಮೀನಿದ್ದು, ಕಳೆದ 50 ವರ್ಷಗಳಿಂದಲೂ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಆದರೆ, ಕಳೆದ 2-3 ವರ್ಷಗಳಿಂದ ಕೋವಿಡ್ ಕಾರಣ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ ವ್ಯವಸಾಯ ಮಾಡಲು ಸಾಧ್ಯವಾಗಿಲ್ಲ.
ಆರ್ಥಿಕ ಮಟ್ಟವನ್ನು ಸುಧಾರಿಸಿಕೊಂಡು ಜಮೀನನ್ನು ಉಳುಮೆ ಮಾಡಲು ಜಮೀನಿಗೆ ತೆರಳಿದ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಜಮೀನನ್ನು ಉಳುಮೆ ಮಾಡದಂತೆ ನಮ್ಮನ್ನು ತಡೆದು, ನಮಗೆ ತೊಂದರೆ ಕೊಡುತ್ತಿದ್ದಾರೆ. ಉಳುಮೆ ನಿಲ್ಲಿಸಿ ಕಂದಾಯ ಇಲಾಖೆ, ಸರ್ವೆ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ದೂರು ನೀಡಲಾಗಿತ್ತು. ಬಳಿಕ ಜಂಟಿ ಸರ್ವೆ ಮಾಡಿಕೊಟ್ಟು ಗಡಿ ಗುರ್ತಿಸಿ ದಾಖಲಾತಿಯನ್ನು ನೀಡಿರುತ್ತಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಜಮೀನಿಗೆ ಸಂಬಂಧಿಸಿದಂತೆ ಸಾಗುವಳಿ ಹಾಗೂ ಆರ್ಟಿಸಿಗಳು ನಮಗೆ ಸರ್ಕಾರದಿಂದ ಮಂಜೂ ರಾಗಿವೆ. ಈ ಪ್ರಕಾರ ಉಳುಮೆ ಮಾಡಲು ತೆರಳಿದರೆ ಅರಣ್ಯ ಇಲಾಖೆಯವರು ಉಳುಮೆ ಮಾಡಲು ಬಿಡದೆ ನಮ್ಮನ್ನು ತಡೆದಿದ್ದಾರೆ. ಆದ್ದರಿಂದ ಕೂಡಲೇ ನಮ್ಮ ಸಮಸ್ಯೆ ಬಗೆಹರಿಸಿ ವ್ಯವಸಾಯ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ನಾಗರಾಜು, ವೆಂಕಟರಮಣಸ್ವಾಮಿ, ರಂಗಸ್ವಾಮಿ ಸಿ.ಎಚ್.ರಂಗಸ್ವಾಮಿ, ಶಿವಣ್ಣ, ನಾಗರಾಜು, ಶೈಲಜಾ, ನಾಗಮ್ಮ, ಮಹದೇವಮ್ಮ, ಗಿರಿಜಮ್ಮ, ರವಿಕುಮಾರ್, ಯಜಮಾನರಾದ ಮಹದೇವ ಯ್ಯ ಸೇರಿದಂತೆ ಇತರರು ಇದ್ದರು.