ಕೋಲಾರ:- ಮುಳಬಾಗಿಲು, ನಕಲಿ ಬಿತ್ತನೆ ಬೀಜ ಹಾಗೂ ಹವಾಮಾನ ವೈಪರಿತ್ಯ ದಿಂದ ನಷ್ಟವಾಗಿರುವ ಟೆಮೋಟೋ, ಆಲೂಗಡ್ಡೆ ಪ್ರತಿ ಎಕರೆಗೆ 50 ಸಾವಿರ ಪರಿಹಾರ ಬಿಡುಗಡೆ ಮಾಡಿ ಹದಗೆಟ್ಟಿರುವ ತಾಲ್ಲೂಕು ಆಡಳಿತವನ್ನು ಸರಿಪಡಿಸಿ ಸರ್ಕಾರಿ ಆಸ್ಪತ್ರೆಗೆ ಮೂಲಭೂತ ಸೌಕರ್ಯಗಳು ಒದಗಿಸಿ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ, ಗೋಮಾಳ ತೆರವುಗೊಳಿಸಲು ವಿಶೇಷ ತಂಡ ರಚಿಸಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರಿಗೆ ಮನವಿಯನ್ನು ಸಲ್ಲಿಸಿದ್ರು.
ಮುಳಬಾಗಿಲು ನಗರದಲ್ಲಿ ನಡೆದ ಜನತಾ ದರ್ಶನದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಬರದ ನಡುವೆಯು ರೈತರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಂತಹ ಟೆಮೋಟೋ ಬೆಳೆಗೆ ಬಿಂಗಿ ರೋಗ ಆಲೂಗಡ್ಡೆ ಮೂರು ತಿಂಗಳಾದರೂ ಗಡ್ಡೆ ಬಿಡದೆ ಹಾಕಿದ ಬಂಡವಾಳ ಕೈಗೆ ಸಿಗದೆ ಖಾಸಗಿ ಸಾಲಕ್ಕೆ ಸಿಲುಕಿ ಸರ್ಕಾರ ತೋಟಗಾರಿಕೆ ಮತ್ತು ಜಿಲ್ಲಾಡಳಿತದ ವರದಿಯಿಂದ ಪರಿಹಾರ ಸಿಗುವ ನಿರೀಕ್ಷೆಯಲ್ಲಿ ರೈತರು ಜಾತಕ ಪಕ್ಷಗಳಂತೆ ಎದುರು ನೋಡುತ್ತಿದ್ದಾರೆ.
ರೈತರ ಹಣೆ ಬರಹವನ್ನು ಬರೆಯುವ ನಕಲಿ ಬಿತ್ತನೆ ಬೀಜ ಔಷಧಿಗಳ ನಿಯಂತ್ರಣ ವಿಲ್ಲದೆ ಪ್ರತಿ ವರ್ಷ ರೈತರು ನಷ್ಟಕ್ಕೆ ಸಿಲುಕುತ್ತಿದ್ದರೂ ನಕಲಿ ತಡೆಗೆ ಪ್ರಬಲ ಕಾನೂನು ಜಾರಿ ಮಾಡಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ತಾಲ್ಲೂಕು ಕಛೇರಿ ಅಧಿಕಾರಿಗಳಿಗೆ ಹಾಗೂ ದಲ್ಲಾಳರಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟು ಜನ ಸಾಮಾನ್ಯರು ಚಿಕ್ಕ ಪುಟ್ಟ ಕೆಲಸಗಳಿಗೂ ಲಂಚ ವಿಲ್ಲದೆ ಬಡವರ ನೆರಳು ತಾಲ್ಲೂಕು ಕಛೇರಿಯ ಆವರಣಕ್ಕೂ ಬೀಳುವಂತಿಲ್ಲ. ಅಷ್ಟರ ಮಟ್ಟಿಗೆ ಇಲಾಖೆ ಹದಗೆಟ್ಟಿದೆ.
ದಾಖಲೆ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಶ್ರೀನಿವಾಸ್ ರವರು ತಾಲ್ಲೂಕಿನ ಕೋಟ್ಯಾಂತರ ರೂಪಾಯಿ ಬೆಳೆ ಬಾಳುವ ಗೋಮಾಳ ಕೆರೆ, ಜಮೀನುಗಳ ದಾಖಲೆಗಳನ್ನು ನಿಯತ್ತಾಗಿ ರಿಯಲ್ ಎಸ್ಟೇಟ್ ಉದ್ದಿಮೆಗಳ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಸರ್ಕಾರದ ಸಂಬಳ ಪಡೆದು ಮಾಡುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸರ್ವೆ ಇಲಾಖೆಯಲ್ಲಿ ಹಣ ನೀಡಿದರೆ ತಾಲ್ಲೂಕನ್ನೇ ಮಾರಾಟ ಮಾಡುವ ಮಟ್ಟಕ್ಕೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆಂದು ದೂರು ನೀಡಿದರು.
ಸರ್ಕಾರಿ ಅಭಿವೃದ್ದಿ ಹಾಗೂ ರೈತರ ಮಾರುಕಟ್ಟೆ ಸಮಸ್ಯೆಗೆ ತಿಂಗಳಾನುಗಟ್ಟಲೆ ಹುಡುಕಾಡಿದರೂ ಕಂದಾಯ ಸರ್ವೆ ಅಧಿಕಾರಿಗಳಿಗೆ ಎಕರೆ ಭೂಮಿ ಸಹ ಸಿಗುತ್ತಿಲ್ಲ. ಆದರೆ ದೇವರಾಯ ಸಮುದ್ರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೂರಾರು ಎಕರೆ ಅಕ್ರಮ ಒತ್ತುವರಿ ಹಾಗೂ ಗಡಿಭಾಗದ ರಾಷ್ಟ್ರೀಯ ಹೆದ್ದಾರಿಯವರೆಗೂ ಬೆಂಗಳೂರು ರಿಯಲ್ ಎಸ್ಟೇಟ್ ಉದ್ದಿಮೆಗಳಿಗೆ ಸರ್ಕಾರಿ ಗೋಮಾಳ ಗುಂಡುತೋಪು, ಸರ್ಕಾರಿ ಕೆರೆ, ರಾಜಕಾಲುವೆಗಳನ್ನು ನಕಲಿ ದಾಖಲೆಗಳನ್ನು ಮಾಡಿ ಮಾರಾಟ ಮಾಡುವ ದಂದೆಯಲ್ಲಿ ಗ್ರಾಮೀಣ ಸೇವೆ ಮಾಡಬೇಕಾದ ಆರ್.ಐ, ವಿ.ಎ., ಉಪತಹಸೀಲ್ದಾರ್ ರವರುಗಳು ನಗರಕ್ಕೆ ಹೊಂದಿಕೊಂಡು ಹಳ್ಳಿಗಳನ್ನು ಮರೆತು ರಿಯಲ್ ಎಸ್ಟೇಟ್ ಉದ್ದಿಮೆಗಳಾಗಿ ಮಾರ್ಪಟ್ಟಿರುವುದು ದುರದೃಷ್ಟಕರ ಅಂತಹ ಕಂದಾಯ ಸರ್ವೆ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯ ಪ್ರಧಾನ ಕಾರ್ಯುದರ್ಶಿ ಪಾರುಕ್ಪಾಷ ಮಾತನಾಡಿ ಬಡವರ ಪಾಲಿಗೆ ಆರೋಗ್ಯಕರವಾದಬೇಕಾದ ಸರ್ಕಾರಿ ಆಸ್ಪತ್ರೆ ಅವ್ಯವಸ್ತೆಗಳ ಭ್ರಷ್ಟಾಚಾರದ ಆಸ್ಪತ್ರೆಯಾಗಿ ಮಾರ್ಪಟ್ಟಿದೆ. ಸೂಜಿಯಿಂದ ಮಾತ್ರೆಯವರೆಗೂ ಲಂಚ ವಿಲ್ಲದೆ ಬಡವರ ಮೈ ಸಹ ಅಲ್ಲಿನ ವೈದ್ಯರು ಹಾಗೂ ನರ್ಸ್ಗಳು ಮುಟ್ಟುವುದಿಲ್ಲ.
ಜೊತೆಗೆ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಬಂದಿರುವ ಐ.ಸಿ.ಯು , ಡಯಾಲೀಸಿಸ್ ಸ್ಕ್ಯಾನಿಂಗ್ ಯಂತ್ರೋಪಕರಣಗಳು ನುರಿತ ತಜ್ಞರಿಲ್ಲದೆ ಕೊಠಡಿಗಳಲ್ಲಿ ದೂಳು ಹಿಡಿಯುವ ಜೊತೆಗೆ ಕೋಮಾಸ್ಥಿತಿಯಲ್ಲಿರುವ ರೋಗಿಯಂತೆ ಆಸ್ಪತ್ರೆ ಸಿಬ್ಬಂದಿ ಕೋಮಾಸ್ಥಿತಿಯಲ್ಲಿದ್ದಾರೆ ಅಸಮದಾನ ವ್ಯಕ್ತಪಡಿಸಿದರು.
ಒಂದು ಕಡೆ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಮತ್ತೊಂದು ಕಡೆ ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಭರಿಸಲಾಗದೆ ಗಡಿಭಾಗದ ಕೂಲಿ ಕಾರ್ಮಿಕರು ನಕಲಿ ವೈದ್ಯರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ತಾಲ್ಲೂಕಿನಾದ್ಯಂತ 30 ಕ್ಕೂ ಹೆಚ್ಚು ನಕಲಿ ಕ್ಲೀನಿಕ್ಗಳಿದ್ದರೂ ಅವುಗಳ ವಿರುದ್ದ ನೆಪ ಮಾತ್ರಕ್ಕೆ ದಾಳಿ ಮಾಡಿ ಮತ್ತೆ 24 ಗಂಟೆಯಲ್ಲಿ ಪ್ರಾರಂಭ ಮಾಡಲು ಲಂಚ ಪಡೆದು ಅನುಮತಿ ನೀಡುತ್ತಿರುವುದು ದುರಾದೃಷ್ಟಕರ. ಇನ್ನು ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ನೆಪ ಮಾತ್ರಕ್ಕೆ ಆಸ್ಪತ್ರೆಗಳಾಗಿ ಯಾವುದೇ ವೈದ್ಯರು, ನರ್ಸ್ಗಳು ಕೆಲಸ ನಿರ್ವಹಿಸುತ್ತಿಲ್ಲವೆಂದು ಆರೋಪ ಮಾಡಿದರು.
ಮಾನ್ಯರು ನಕಲಿ ಬಿತ್ತನೆ ಬೀಜ ಹವಮಾನ ವೈಪರಿತ್ಯನಿಂದ ನಷ್ಟವಾಗಿರುವ ಟೆಮೊಟೋ ಆಲೂಗಡ್ಡೆ ಬೆಳೆ ವರದಿಯನ್ನು ತರಿಸಿಕೊಂಡು ಮಾನ್ಯ ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಪರಿಹಾರವನ್ನು ಬಿಡುಗಡೆ ಮಾಡಿ ಹದಗೆಟ್ಟಿರುವ ತಾಲ್ಲೂಕು ಆಡಳಿತ ಆಸ್ಪತ್ರೆ ಸರಿಪಡಿಸಿ ಜನ ಸಮಾನ್ಯರ ರಕ್ಷಣೆ ಮಾಡಬೇಕೆಂದು ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಅಕ್ರಂ ಪಾಷ ಸರಕಾರದ ಗಮನಕ್ಕೆ ತಂದು ಪರಿಹಾರ ನೀಡುವ ಭರವಸೆ ಜೊತೆಗೆ ಹದಗೆಟ್ಟಿರುವ ಸರ್ಕಾರಿ ಆಸ್ಪತ್ರೆ ತಾಲ್ಲೂಕು ಆಡಳಿತವನ್ನು ಸರಿಪಡಿಸಿ ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ತೊಡಗಿರುವ ಕಂದಾಯ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಬಂಗಾರಿ ಮಂಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್, ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಹೆಬ್ಬಣಿ ಆನಂದರೆಡ್ಡಿ ಸುನಿಲ್ ಕುಮಾರ್, ವಿಶ್ವ, ವಿಜಯ್ಪಾಲ್, ಗುರು, ಭಾಸ್ಕರ್, ಧರ್ಮ, ನಾಗೇಶ್, ಗಿರೀಶ್, ಮುಂತಾದವರು ಉಪಸ್ಥಿತರಿದ್ದರು.