ನವರಸ ನಾಯಕ ಜಗ್ಗೇಶ್ ಕಳೆದ ಕೆಲ ದಿನಗಳ ಹಿಂದೆ ಕುಂಭಮೇಳಕ್ಕೆ ಹೋಗಿ ಬಂದಿದ್ದು ಅಲ್ಲಿನ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಮಾನದಲ್ಲಿ ಒಬ್ಬರೇ ಕುಂಭಮೇಳಕ್ಕೆ ಹೋಗಿ ಬಂದ ಜಗ್ಗೇಶ್ ತಾವಲ್ಲಿ ಒಂಟಿಯಾಗಿ ಓಡಾಡಿದ್ದರ ಬಗ್ಗೆ ಮಾತನಾಡಿದ್ದಾರೆ. ಇದೀಗ ಜಗ್ಗೇಶ್ ಅವರ ಈ ಪ್ರವಾಸದ ಬಗ್ಗೆ ಕೆಲವರು ಅಪಸ್ವರ ಎತ್ತಿದ್ದರು. ದುಡ್ಡಿದೆ ಹೋಗಿದ್ದೀರಾ ಎಂದು ಹೇಳಲು ಶುರು ಮಾಡಿದ್ದರು. ಈಗ ಅವರಿಗೆ ಜಗ್ಗೇಶ್ ಉತ್ತರ ನೀಡಿದ್ದಾರೆ.
ದುಡ್ಡಿದ್ದರೆ ದುನಿಯಾ ಅಲ್ಲ ಎಲ್ಲದಕ್ಕೂ ಯೋಗ ಇರಬೇಕು, ಆ ದೇವರ ಕೃಪೆ ಇರಬೇಕು ಎಂಬ ಅರ್ಥದಲ್ಲಿ ಬರಹವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಜಗ್ಗೇಶ್ ಬರೆದ ಬರಹದಲ್ಲೇನಿದೆ ಎಂಬುದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
ದಯವಿಟ್ಟು ಓದಿ, ಒಂದು ದಿನ ಇದ್ದದ್ದು ಮತ್ತೊಂದು ದಿನ ಇಲ್ಲವಾಗುವುದು ನಶ್ವರ ಜಗತ್ತು. ಅರ್ಥಾತ್ ಇಂದು ಇದ್ದುವ ನಾಳೆ ಇರನು! ಇರುವ ಇರನು ಅಂತರದಲ್ಲಿ ದೇವರ ಅಸ್ಥಿತ್ವ ಪ್ರಧಾನ ! ಇದ್ದಾಗ ಶಿವ ಹೋದಾಗ ಶವ! ಇಷ್ಟು ಮನುಷ್ಯನಿಗೆ ಆಳದಲ್ಲಿ ಅರಿವಾದರೆ ಅವನ “ನಾನು” ಅರ್ಥ ಕಳೆದುಕೊಂಡು “ನೀನು” ಉಳಿದು ಬಿಡುತ್ತದೆ ಆ “ನೀನು” ಪರಬ್ರಹ್ಮ ಸ್ವರೂಪ ಅಂದರೆ ದೇವರು.
ನನ್ನ ಇತ್ತೀಚಿನ ಕುಂಭಮೇಳಕ್ಕೆ ಹೋದ ಉದಾಹರಣೆ..ಕೆಲವರು ನೀವು ಸಂಸದ ನಿಮಗೇನು ದುಡ್ಡಿದೆ ಹೋದಿರಿ ಎಂದರು! ನಾನು ಹೋದ ಸತ್ಯ ತಿಳಿಸುವೆ. ದೆಹಲಿಯ ಎಲ್ಲಾ ವರಿಷ್ಟರು ನಮ್ಮ ರಾಜ್ಯದ ಉಸ್ತುವಾರಿ ನಮ್ಮ ರಾಜ್ಯದ ಕೇಂದ್ರ ಮಂತ್ರಿಗಳ ಹಾಗು ಅವರ ಆಪ್ತಸಹಾಯಕರ ಕೇಳಿದೆ ಯಾರು ತುಟಿಬಿಚ್ಚಲಿಲ್ಲಾ ಸಹಾಯ ಮಾಡಲಿಲ್ಲಾ!
144ವರ್ಷಕ್ಕೆ ಒಮ್ಮೆ ಬರುವ ಮಹಾಕುಂಭಕ್ಕೆ ನನಗೆ ಯೋಗವಿಲ್ಲವೆ ಎಂದು ದುಃಖಿಸಿದೆ. ಮನೆಯಲ್ಲಿ ಯಜ್ಞ ಮಾಡಿಸಿ “ರಾಯರಲ್ಲಿ” ಬೇಡಿಕೆ ಇಟ್ಟು ನನ್ನ ಜೊತೆ ನೀವಿದ್ದೀರಿ ಚಿಂತೆ ಏಕೆ ಎಂದು ವಿಮಾನ ಟಿಕಿಟ್ ಯತ್ನಿಸಿದೆ. ಎಲ್ಲ sold out ಆಗಿತ್ತು. ಮತ್ತೆ ವಿಘ್ನವೆ ಎಂದು ಕೊರಗಿದೆ. ಸ್ವಲ್ಪ ಸಮಯದ ನಂತರ ಕರೆಬಂತು ಸಾರ್ ಒಂದೆ ಇದೆ ಪರಿಮಳರವರಿಗೆ ಆಗದು ಏನುಮಾಡಲಿ ಎಂದ? Advertisement ಆಗ ನನ್ನ ಉತ್ತರ ಬರುವಾಗ ಒಬ್ಬನೆ ಹೋಗುವಾಗ ಒಬ್ಬನೆ ಬುಕ್ ಮಾಡು ಎಂದೆ ಹೋದೆ! ಅಲ್ಲಿ ನೋಡಿದರೆ ಸಹಾಯ ಮಾಡಲು ಯಾರು ಇಲ್ಲ. ಇಸ್ಕಾನ ಆಲಯದ ಕಾರು ಮಾತ್ರ ಇತ್ತು!ಕೋಟಿ ಜನ ಸಂಖ್ಯೆಯ ನಡುವೆ ನಾನು ಯಾರು ಇಲ್ಲದೇ ಅನಾಥನಾದೆ! ರಾಯರೆ ನೀವಿದ್ದೀರಿ ಎಂದೆ ಮನದಲ್ಲಿ ನೋಡಿ. ಬಂದ ಒಬ್ಬ ಪರಿಚಯವಿಲ್ಲದ ಮಾಜಿ ಕ್ರಿಕೆಟಿಗ ಪುಂಜ ಆತನಿಗೆ ಸಿಕ್ಕ ಪ್ರೋಟೋಕಾಲ್ ಬಳಸಿ ಕೋಟಿ ಜನಜಂಗುಳಿ ನಡುವೆ ಪೋಲೀಸರ ಹಾರನ್ ಹಾಕಿ ಪಕ್ಕ ತ್ರಿವೇಣಿ ಸಂಗಮಕ್ಕೆ ಹೋಗಿ ಸ್ನಾನ ಮಾಡಿಸಿಬಿಟ್ಟ. ಅವರ ಮತ್ತೊಬ್ಬ ಸಂಗಡಿಗರು ನಮ್ಮ ಮಲ್ಲೇಶ್ವರ ಹೆಮ್ಮೆಯ ಶಾಸಕರು ಅಶ್ವಥ್ ರವರು..ವಾಪಸ್ ಬರುವಾಗ ನಮ್ಮ ವಿಮಾನ 5ಘಂಟೆ ವಿಳಂಬ ಎಂದರು. ಏನು ಮಾಡೋದು ಫುಟ್ ಪಾತಲ್ಲಿ ಕಾಫಿ ಕುಡಿಯುತ್ತ ಕುಳಿತೆ.. ನಂತರ ಮತ್ತೋಂದು ಪವಾಡ ವಿಮಾನದ ಉಸ್ತುವಾರಿ ಬಂದು ಸಾರ್ ನಿಮ್ಮ ವಿಮಾನ ತಡವಾಗುತ್ತೆ ಈಗ ಹಾರಲು ತಯಾರಿರುವ ವಿಮಾನ ಇದೆ ಹೋಗಿ ಎಂದು ಟಿಕೆಟ್ ಬದಲಿಸಿ ಬೆಂಗಳೂರಿಗೆ ಕಳಿಸಿಬಿಟ್ಟ!! ಈಗ ಹೇಳಿ ನಮ್ಮ ಬದುಕಿಗೆ ಯಾರು ಬೇಕು. ? ಕೆಲಸಕ್ಕೆ ಬರದ ಸಮಯೋಚಿತ ಸಹಾಯಕ್ಕೆ ಮನುಷ್ಯರೋ ಅಥವ ನಮ್ಮೊಳಗೆ ಇರುವ ದೇವರ? ಶುದ್ಧವಾಗಿ ಬದುಕಿ ಆಧ್ಯಾತ್ಮಿಕ ದಾರಿಯಲ್ಲಿ ನಡೆಯುವವರ ಬೆನ್ನ ಹಿಂದೆ ಕಾಯಲು ಒಬ್ಬರು ಇದ್ದೆ ಇರುತ್ತಾರೆ ಅವರೆ ನಮ್ಮ ರಾಯರು. ಯಾರ ಬಗ್ಗೆ ಅರಿವಿರದೆ ಹಂಗಿಸಬೇಡಿ, ಭಗವತ್ ಭಕ್ತರು ನೊಂದರೆ ಮರೆಯಲಾಗದ ದುಃಖ ಕಾಡಿಬಿಡುತ್ತದೆ ಅಣಕ ಹಂಗಿಸಿದವರಿಗೆ!! ನಿಮ್ಮ ಪಾಡಿಗೆ ಯಾರಿಗು ತೊಂದರೆ ಕೊಡದೆ ಸುಂದರವಾಗಿ ಬದುಕಿ ದೇವರು ನಿಮ್ಮ ಜೊತೆ ಇರುತ್ತಾರೆ. ನನ್ನ ಬದುಕಂತು ಎಲ್ಲೆಲ್ಲು ರಾಯರೆ ಕಾಣುತ್ತಾರೆ. ನಂಬಿದ ಭಕ್ತರಿಗೆ ರಾಯರು ಕೈಬಿಡರು “ಗುರುವೆ ಶರಣಂ” ಮಾರ್ಚ್ 6 ರಾಯರ ಹುಟ್ಟುಹಬ್ಬ ಹೋಗುತ್ತಿರುವೆ ಸಾಧ್ಯವಾದರೆ ನೀವು ಬನ್ನಿ. ಎಂದು ಬರೆದುಕೊಂಡಿದ್ದಾರೆ.