ಬೆಂಗಳೂರು;– ಪ್ರತಿಪಕ್ಷ ನಾಯಕ, ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬದಿಂದ ಪಕ್ಷಕ್ಕೆ ಹಿನ್ನಡೆ ಸಹಜ ಎಂದು ಎ ನಾರಾಯಣಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ವಿಳಂಬದಿಂದ ರಾಜ್ಯದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವುದು ಸಹಜ. ಪಂಚರಾಜ್ಯಗಳ ಚುನಾವಣೆ ನಂತರ ಪಕ್ಷದ ವರಿಷ್ಠರು ಈ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಹೈಕಮಾಂಡ್ ಇರುತ್ತದೆ. ಪಕ್ಷದ ಒಳಿತು, ಜನಹಿತ ಸಾಧನೆಗೆ ಯೋಗ್ಯವಾದ ತೀರ್ಮಾನ ಕಾಲಕಾಲಕ್ಕೆ ತೆಗೆದುಕೊಳ್ಳುತ್ತಾರೆ. ಜೆಡಿಎಸ್ ಪಕ್ಷವನ್ನು ಎನ್ಡಿಎಗೆ ಸೇರಿಸಿಕೊಂಡಿದ್ದು, ರಾಜ್ಯದಲ್ಲಿ ಮೈತ್ರಿ ಮಾಡಿಕೊಳ್ಳುವ ತೀರ್ಮಾನವೆಲ್ಲ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಂತದಲ್ಲೇ ಆಗಿದೆ ಎಂದು ಸ್ಪಷ್ಟಪಡಿಸಿದರು.
ಜಾತಿ ರಾಜಕಾರಣ ಇಷ್ಟಪಡುವುದಿಲ್ಲ, ಆ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. 3-4 ರಾಜ್ಯಗಳು ಬಿಟ್ಟರೆ ಬೇರೆಲ್ಲೂ ದಲಿತರು ಮುಖ್ಯಮಂತ್ರಿಯಾದದ್ದಿಲ್ಲ. ಈಗಲೂ ದಲಿತರು ಹಾಗೂ ಹಿಂದುಳಿದವರು ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷಗಳ ನಾಯಕರ ಮನೆ ಬಾಗಿಲು ಕಾಯುವುದು ತಪ್ಪಿಲ್ಲ. ದಲಿತ ಸಿಎಂ ಚರ್ಚೆಗಿಂತ ಸಮುದಾಯಗಳ ಏಳಿಗೆಗೆ ಏನೆಲ್ಲ ಮಾಡಿದ್ದೇವೆ ಎಂದು ಆಯಾ ಇಲಾಖೆ ಸಚಿವರು ಆತ್ಮವಿಮರ್ಶೆ ಮಾಡಿಕೊಂಡರೆ ಸಾಕು. ದಲಿತರ ಸಬಲೀಕರಣ ಸಾಧ್ಯವಾಗಲಿದೆ ಎಂದು ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.