ಬೆಂಗಳೂರು:- ಅಪಘಾತದ ದೂರಿಗೆ ವಿಳಂಬ ಮಾಡಿದ ಸಾರಿಗೆ ನಿಗಮ, ಚಾಲಕ, ಕಂಡಕ್ಟರ್ಗೆ ₹17 ಲಕ್ಷ ದಂಡ ವಿಧಿಸಲಾಗಿದೆ. ಪರಿಹಾರವನ್ನು ಮೃತನ ಕುಟುಂಬಕ್ಕೆ ನೀಡಬೇಕೆಂದು ಹೈಕೋರ್ಟ್ ಆದೇಶಿಸಿದೆ.
ಇದೇ ವೇಳೆ, ಬಸ್ ಪ್ರಯಾಣಿಕ ಅಪಘಾತಕ್ಕೆ ಗುರಿಯಾಗಿ ಗಾಯಗೊಂಡರೆ ಕೂಡಲೇ ಆತನಿಗೆ ವೈದ್ಯಕೀಯ ನೆರವು ಕಲ್ಪಿಸುವುದು ಮತ್ತು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡುವುದು ಬಸ್ ಚಾಲಕ ಮತ್ತು ನಿರ್ವಾಹಕನ ಕರ್ತವ್ಯ ಎಂದು ಹೇಳಿದೆ.
ಪ್ರಯಾಣಿಕನೋರ್ವ ಕರ್ನಾಟಕ ವಾಯವ್ಯ ರಸ್ತೆ ಸಾರಿಗೆ ನಿಗಮಕ್ಕೆ (ಎನ್ಡಬ್ಲ್ಯೂಕೆಆರ್ಟಿಸಿ) ಸೇರಿದ ಬಸ್ನಿಂದ ನಿಲ್ದಾಣದಲ್ಲಿ ಕಳಗೆ ಇಳಿಯುವಾಗ ಚಾಲಕ ದಿಢೀರ್ ಆಗಿ ಬಸ್ ಮುಂದಕ್ಕೆ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದ. ಘಟನೆ ಸಂಬಂಧ ದೂರು ನೀಡಲು ನಾಲ್ಕು ದಿನಗಳ ಕಾಲ ವಿಳಂಬ ಮಾಡಿದ ಹಾಗೂ ಬಸ್ ಮುಂದೆ ಚಲಾಯಿಸುವಲ್ಲಿ ಚಾಲಕ ಹಾಗೂ ನಿರ್ವಾಹಕ ತೋರಿದ ನಿರ್ಲಕ್ಷ್ಯ, ಕರ್ತವ್ಯ ಲೋಪವನ್ನು ಪರಿಗಣಿಸಿದ ಹೈಕೋರ್ಟ್ ಈ ಆದೇಶ ಮಾಡಿದೆ.
ಅಲ್ಲದೆ, ಮೃತಪಟ್ಟ ಪ್ರಯಾಣಿಕನ ಕುಟುಂಬಕ್ಕೆ ಶೇ.6ರಷ್ಟು ಬಡ್ಡಿದರಲ್ಲಿ 16.95 ಲಕ್ಷ ರು. ಪರಿಹಾರ ನೀಡುವಂತೆ ಎನ್ಡಬ್ಲ್ಯೂಕೆಆರ್ಟಿಸಿಗೆ ಮತ್ತು ಘಟನೆಗೆ ಕಾರಣವಾದ ಬಸ್ ಚಾಲಕನಿಗೆ ನಿರ್ದೇಶಿಸಿ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.