ಬರ, ನೀರಿನ ಕೊರತೆಯಿಂದಾಗಿ ಕಬ್ಬು, ತೊಗರಿ ಸೇರಿದಂತೆ ಇತರೆ ಬೆಳೆಗಳು ಕೈಕೊಟ್ಟರೂ ಕೂಡ ಮೆಣಸಿನಕಾಯಿ ಕೈಹಿಡಿಯುತ್ತದೆ ಎಂಬ ರೈತರ ಭರವಸೆ ಹುಸಿಯಾಗಿದೆ.
ಮುದ್ದೇಬಿಹಾಳ, ತಾಳಿಕೋಟೆ ಹಾಗೂ ನಾಲತವಾಡ ಸೇರಿದಂತೆ ಹಲವೆಡೆ ಪ್ರತಿ ರೈತರು 20 ರಿಂದ 30 ಎಕರೆ ಪ್ರದೇಶದಲ್ಲಿ ಡಬ್ಬಿ, ಕಡ್ಡಿ, ಹೈಬ್ರಿಡ್, ಬ್ಯಾಡಗಿ ಹಾಗೂ 5531 ಸೇರಿದಂತೆ ನಾನಾ ಬಗೆಯ ಮೆಣಸಿನಕಾಯಿ ಬೆಳೆದಿದ್ದಾರೆ. ಜೋಳ, ಕಡಲೆ, ಗೋಧಿ ಬೆಳೆದ ರೈತರು ಅದರೊಟ್ಟಿಗೆ ಇರುವ ಜಮೀನಲ್ಲಿ ಬ್ಯಾಡಗಿ ಹಾಗೂ ಗುಂಟೂರು ಮೆಣಸಿನಕಾಯಿ ಬೆಳೆದಿದ್ದು, ಸದ್ಯ ಬೆಲೆ ಕುಸಿತಗೊಂಡಿದ್ದು ಮೆಣಸಿನಕಾಯಿ ರೈತರ ಪಾಲಿಗೆ ಖಾರವಾಗಿ ಮಾರ್ಪಟ್ಟಿದೆ.
ವಾಡಿಕೆಯ ಮಳೆ ಕೈಕೊಟ್ಟ ಪರಿಣಾಮ ರೈತರು ಪ್ರತಿ ಬೆಳೆಯಲ್ಲೂ ಭಾರಿ ನಷ್ಟ ಅನುಭವಿಸುವಂತಾಗಿದೆ. ಕಬ್ಬಿನ ಇಳುವರಿ ಕುಂಠಿತದ ಶಾಕ್ ಅನುಭವಿಸಿದ ರೈತರು ಈ ಸಲ ಮೆಣಸಿನಕಾಯಿ ಬೆಳೆದಿದ್ದು, ಕೂಲಿ, ಔಷಧ, ಗೊಬ್ಬರಕ್ಕೆ ಅಪಾರ ಖರ್ಚು ಮಾಡಿದ್ದಾರೆ. ಈಗ ಸೂಕ್ತ ಬೆಲೆಯೂ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.