ರಾಯಚೂರು:- ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ನೀರಾವರಿ ಪ್ರದೇಶ ಹೊಂದಿರುವ ಮತ್ತು ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿರುವ ಸಿಂಧನೂರ ತಾಲೂಕನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸಿ ಮೇಲ್ದರ್ಜೇಗೇರಿಸಬೇಕು ಎಂದು ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಹೇಳಿದರು. ಸಿಂಧನೂರ ಪಟ್ಟಣದ ಕುಷ್ಟಗಿ ರಸ್ತೆಯಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಡಿಸೆಂಬರ್ 30 ರಂದು ನಡೆದ ಮಹತ್ವದ ತಿಮ್ಮಾಪುರ ಏತ ನೀರಾವರಿ ಯೋಜನೆಯ ಲೋಕಾರ್ಪಣೆ,
ಜಲಜೀವನ ಮಿಷನ್ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಸರ್ಕಾರಿ ಪದವಿ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಮತ್ತು ಕರ್ನಾಟಕ ಸಂಭ್ರಮ-50ರ ರಥಯಾತ್ರೆಗೆ ಚಾಲನೆ ಮತ್ತು ಸಿಂಧನೂರ ವಿಧಾನಸಭಾ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಿಮ್ಮಾಪುರ ಏತ ನೀರಾವರಿ ಯೋಜನೆಯು ಕಲಬುರಗಿ ವಿಭಾಗದಲ್ಲಿಯೇ ಅತ್ಯಂತ ಮಹತ್ವದ ಯೋಜನೆ ಯಾಗಿದೆ. ಈ ಯೋಜನೆಗೆ ಈ ಹಿಂದೆ ಅಡಿಗಲ್ಲು ಹಾಕಿದ್ದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ನವರೇ ಮತ್ತೀಗ ಲೋಕಾರ್ಪಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು. ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ನೀರಾವರಿ ಪ್ರದೇಶ ಹೊಂದಿದ ತಾಲೂಕು ಸಿಂಧನೂರ ಆಗಿದೆ. 64 ವರ್ಷಗಳ ಇತಿಹಾಸ ಹೊಂದಿರುವ ತುಂಗಭದ್ರಾ ಯೋಜನೆಯು ವಿಶೇಷವಾಗಿ ರಾಯಚೂರು ಸೇರಿದಂತೆ ಮೂರು ಜಿಲ್ಲೆಗಳ ರೈತರ ಜೀವನಾಡಿಯಾಗಿದೆ.
ಈ ಜಲಾಯಶಕ್ಕೆ ಇನ್ನಷ್ಟು ಶಕ್ತಿ ತುಂಬಬೇಕಾದ ಕೆಲಸ ಆಗಬೇಕಿದೆ. 500 ಕೋಟಿ ರೂ.ಗಳನ್ನು ಈ ಬಜೆಟ್ನಲ್ಲಿ ಇದಕ್ಕಾಗಿ ಮೀಸಲಿಡಬೇಕು. 15,000 ಕೋಟಿ ರೂ.ಅಂದಾಜು ಮೊತ್ತದ ನವಲಿ ಜಲಾಶಯಕ್ಕೆ ಚಾಲನೆ ಕೊಡಬೇಕು. ಈ ಬಗ್ಗೆ ಈ ಭಾಗದ ಜನ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಬೇಕು. ಈ ಭಾಗದ ಜನರ ನೀರಿನ ಭವಣೆಯನ್ನು ತಪ್ಪಿಸಬೇಕು ಎಂದು ತಿಳಿಸಿದರು. ಮೆಹಬೂಬನಗರ- ಗಿಣಿಗೇರಾ ರೈಲು ಹಳಿ ನಿರ್ಮಾಣಕ್ಕೆ ಈ ಹಿಂದೆ ಚಾಲನೆ ನೀಡಲಾಗಿದೆ. 80 ಕಿಮಿ ಅಂತರದ ಸಿಂಧನೂರ-ರಾಯಚೂರು ರೈಲ್ವೆ ಸಂಪರ್ಕ ಕಾರ್ಯವಾಗಬೇಕಿದೆ.
ರಾಜ್ಯ ಸರ್ಕಾರವು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಕಾಲೇಜುಗಳಿಗೆ ಹೆಚ್ಚಿನ ಅನುದಾನ ಕೊಡಬೇಕು. ರಾಯಚೂರು ಜಿಲ್ಲೆಯಲ್ಲಿ ಇನ್ನೂ ಬೇರೆ ಬೇರೆ ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ಕೊಡಬೇಕು. ವಿಶೇಷವಾಗಿ ನೀರಾವರಿ, ಕೃಷಿ, ಕಂದಾಯ ಸೇರಿದಂತೆ ಪ್ರಮುಖ ಇಲಾಖೆಗಳನ್ನು ಬಲಪಡಿಸಬೇಕು ಎಂದರು. ನುಡಿದಂತೆ ನಡೆಯುವ ಸರ್ಕಾರ ನಮ್ಮದು. ವಿವಿಧ ಗ್ಯಾರಂಟಿ ಯೋಜನೆಗಳು ಜನಪರವಾಗಿ, ವಿದ್ಯಾರ್ಥಿ, ಬಡವರ ಪರವಾಗಿವೆ ಎಂದೆರು.
ಅನುದಾನಕ್ಕೆ ಮನವಿ: ಸಿಂಧನೂರ ಪಟ್ಟಣದಲ್ಲಿನ ಸರ್ಕಾರಿ ಪದವಿ ಕಾಲೇಜಿಗೆ 50 ವರ್ಷವಾಗಿದೆ. ಈ ಕಟ್ಟಡ ಹಳೆಯದಾಗಿದೆ. ಕೆಕೆಆರ್ಡಿಬಿಯಿಂದ ಅನುದಾನ ಸಿಕ್ಕು ಇದು ಹೊಸ ಕಟ್ಟಡ ಕಾಣುವಂತಾಗಬೇಕು ಎಂದು ಇದೆ ವೇಳೆ ಶಾಸಕರು ಮನವಿ ಮಾಡಿದರು. ಸಮಾರಂಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ, ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜ, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ,
ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ, ಶಿರಗುಪ್ಪ ಶಾಸಕರಾದ ಡಿ.ಎಂ.ನಾಗರಾಜ, ಮಾನ್ವಿ ಶಾಸಕರಾದ ಹಂಪಯ್ಯ ನಾಯಕ, ಮಸ್ಕಿ ಶಾಸಕರಾದ ಆರ್ ಬಸನಗೌಡ ತುರವಿಹಾಳ, ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ಧಲ್, ಮುಖಂಡರಾದ ಅಮರೇಗೌಡ ಬಯ್ಯಾಪುರ, ಒಳಬಳ್ಳಾರಿ ಗ್ರಾಪಂ ಅಧ್ಯಕ್ಷೆ ಮಹಾದೇವಮ್ಮ, ಬಾದರ್ಲಿ ಗ್ರಾಪಂ ಅದ್ಯಕ್ಷ ದಿಲೀಪ್ ಭೀಮಲ್ಬಿಶ್ವಾಸ್, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಾದ ರಾಕೇಶ್ ಸಿಂಗ್,
ಕೃಷ್ಣಮೂರ್ತಿ ಬಿ ಕುಲಕರ್ಣಿ, ಜಗದೀಶ ಜಿ., ಬಿ.ಎಸ್.ಲೋಕೇಶಕುಮಾರ, ಎಜಾಜ್ ಹುಸೇನ್, ರಾಜೇಶ ಅಮ್ಮಿನಬಾವಿ, ಎಲ್.ಬಸವರಾಜ, ಸತ್ಯ ನಾರಾಯಣ ಶೆಟ್ಟಿ ಸೇರಿದಂತೆ ಇನ್ನೀತರ ಅಧಿಕಾರಿಗಳು, ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾಯನಿರ್ವಹಣಾಧಿಕಾರಿ ರಾಹುಲ್ ಪಾಂಡ್ವೆ, ಜಿಲ್ಲಾ ಪೊಲೀಸ್ ಇಲಾಖೆಯ ವರಿಷ್ಠಾಧಿಕಾರಿ ನಿಖಿಲ್ ಬಿ., ಅಪರ ಜಿಲ್ಲಾಧಿಕಾರಿ ಡಾ.ದುರುಗೇಶ ಕೆ.ಆರ್., ಸಹಾಯಕ ಆಯುಕ್ತರಾದ ಮೆಹಬೂಬಿ ಸೇರಿದಂತೆ ಇತರರು ಇದ್ದರು.