ವಯನಾಡ್/ಬೆಂಗಳೂರು: ಕೇರಳದ ವಯನಾಡಿನಲ್ಲಿ ಮಹಾಮಳೆಗೆ ಸಂಭವಿಸಿರುವ ಭೂಕುಸಿತದಿಂದ (Wayanad Landslides) ನೂರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 143ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆಯಾಗಿದೆ. ನೂರಾರು ಮಂದಿ ಆಶ್ರಯ ಕಳೆದುಕೊಂಡಿದ್ದಾರೆ.
ವಯನಾಡಿನ ಮೆಪ್ಪಾಡಿಯಲ್ಲಿ ಸಂಭವಿಸಿದ ಘೋರ ಗುಡ್ಡಕುಸಿತ ದುರಂತದಲ್ಲಿ ನಾಲ್ವರು ಕನ್ನಡಿಗರೂ (Kannadigas) ಪ್ರಾಣ ತೆತ್ತಿದ್ದಾರೆ. ಅಲ್ಲದೇ ಮಂಡ್ಯದ ಇಬ್ಬರು ಹಾಗೂ ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಇಬ್ಬರು ಕನ್ನಡಿಗರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ವಯನಾಡಿನಲ್ಲಿ ಜಲಪ್ರಳಯ: ಇಡೀ ಊರಿಗೆ ಊರೇ ಸ್ಮಶಾನ, ಎಲ್ಲವು ಕ್ಷಣಾರ್ಧದಲ್ಲಿ ಸಮಾಧಿ
ಈವೆರೆಗೆ 143 ಮಂದಿ ಮೃತಪಟ್ಟಿದ್ದು, 3 ಸಾವಿರ ಜನರನ್ನ ನಿರಾತ್ರಿತ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. 480ಕ್ಕೂ ಹೆಚ್ಚು ಜನರನ್ನ ರಕ್ಷಣೆ ಮಾಡಲಾಗಿದ್ದು, ಇನ್ನೂ 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ, ಈ ಪೈಕಿ ಕನ್ನಡಿಗರೂ ಇದ್ದಾರೆ ಎಂದು ರಕ್ಷಣಾ ತಂಡಗಳು ತಿಳಿಸಿವೆ.
ದೇವರನಾಡಲ್ಲಿ ಸಂಭವಿಸಿದ ಜಲಪ್ರಳಯಕ್ಕೆ ಚಾಮರಾಜನಗರ (Chamarajanagara) ಮೂಲದ ಪುಟ್ಟಸಿದ್ದಶೆಟ್ಟಿ (62), ರಾಣಿ ಮದರ್ (50), ರಾಜನ್, ರಜಿನಿ ಎಂಬವರು ಸಾವನ್ನಪ್ಪಿದ್ದಾರೆ. ರಾಜನ್ ಮತ್ತು ರಜನಿ ದಂಪತಿ ನಾಪತ್ತೆಯಾಗಿದ್ದಾರೆ. ಅಲ್ಲದೇ ಮಂಡ್ಯ ಕೆ.ಆರ್ ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮ ಲೀಲಾವತಿ, ನಿಹಾಲ್ ಎಂಬವರೂ ನಾಪತ್ತೆಯಾಗಿದ್ದಾರೆ. ಮೂವರು (ಅನಿಲ್, ಪತ್ನಿ ಝಾನ್ಸಿ, ತಂದೆ ದೇವರಾಜು) ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದುರಂತದಲ್ಲಿ ಬದುಕುಳಿದ ದೇವರಾಜು ಎಂಬವರು ಭೂಕುಸಿತ ಸಂಭವಿಸಿದ ಭೀಕರತೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಬ್ಬಬ್ಬಾ, ಮಣ್ಣು, ನೀರು ಒಟ್ಟಿಗೇ ರಭಸವಾಗಿ ಬರುತ್ತಿತ್ತು. ಬಂಡೆಗಳು ಉರುಳಿಬಂದು ಅಪ್ಪಳಿಸಿತ್ತಿದ್ದವು, ಉಸಿರು ಹಿಡಿದು ಕುಳಿತುಕೊಂಡಿದ್ದೆ. 500ಕ್ಕೂ ಹೆಚ್ಚು ಜನ ನಾಪತ್ತೆಯಾಗಿರಬಹುದು ಎಂದು ಕಣ್ಣೀರಿಟ್ಟಿದ್ದಾರೆ.