ಹಲವು ವರ್ಷಗಳಿಂದ ಮಲಯಾಳಂ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟ ದಿಲೀಪ್ ಶಂಕರ್ ಅವರ ಅವರ ಶವ ಹೋಟೆಲ್ ರೂಮ್ ನಲ್ಲಿ ಪತ್ತೆಯಾಗಿದೆ. ಶೂಟಿಂಗ್ ಸಲುವಾಗಿ ದಿಲೀಪ್ ಶಂಕರ್ ಹೋಟೆಲ್ನಲ್ಲಿ ಉಳಿದುಕೊಂಡಿದ್ದು, ಅದೇ ಹೋಟೆಲ್ ರೂಮ್ನಲ್ಲಿ ಅವರ ಶವ ಪತ್ತೆಯಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ದಿಲೀಪ್ ಎರಡು ದಿನದ ಹಿಂದೆಯೇ ನಿಧನರಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅವರು ಉಳಿದುಕೊಂಡಿದ್ದ ರೂಮ್ನಿಂದ ಕೆಟ್ಟ ವಾಸನೆ ಬರುತ್ತಿದ್ದು, ಅನುಮಾನ ಬಂದು ಬಾಗಿಲು ತೆಗೆದು ನೋಡಿದಾಗ ಅವರ ಮೃತ ದೇಹ ಪತ್ತೆಯಾಗಿದೆ.
ಮಲಯಾಳಂನ ‘ಪಂಚಾಗ್ನಿ’ ಧಾರಾವಾಹಿಯಲ್ಲಿ ದಿಲೀಪ್ ಶಂಕರ್ ನಟಿಸುತ್ತಿದ್ದರು. ಶೂಟಿಂಗ್ ಹಿನ್ನೆಲೆಯಲ್ಲಿ ನಾಲ್ಕು ದಿನದ ಹಿಂದೆಯೇ ತಿರುವನಂತಪುರಂನಲ್ಲಿನ ಹೋಟೆಲ್ ಗೆ ಬಂದಿದ್ದರು. ಆದರೆ ಕಳೆದ ಎರಡು ದಿನಗಳಿಂದ ಅವರು ರೂಮ್ನಿಂದ ಹೊರಗೆ ಬಂದಿರಲಿಲ್ಲ. ಹಾಗಾಗಿ ಹೋಟೆಲ್ ಸಿಬ್ಬಂದಿಗೆ ಅನುಮಾನ ಬಂದಿದ್ದು ಬಾಗಿಲು ತೆಗೆದು ನೋಡಿದ್ದಾರೆ. ಈ ವೇಳೆ ದಿಲೀಪ್ ಮೃತದೇಹ ಪತ್ತೆಯಾಗಿದೆ.
ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದವರು ಬಂದು ಹೋಟೆಲ್ ರೂಮ್ನ ತಪಾಸಣೆ ಮಾಡಿದ್ದಾರೆ. ಕೊಲೆ ಶಂಕೆ ವ್ಯಕ್ತವಾಗಿಲ್ಲ. ಆದರೆ ಮರಣೋತ್ತರ ಪರೀಕ್ಷೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ದಿಲೀಪ್ ಶಂಕರ್ ಅವರಿಗೆ ಅನಾರೋಗ್ಯ ಇತ್ತು ಎನ್ನಲಾಗಿದೆ. ಆದರೆ ಆ ಬಗ್ಗೆ ಯಾರಿಗೂ ನಿಖರ ಮಾಹಿತಿ ಇರಲಿಲ್ಲ. ‘ಪಂಚಾಗ್ನಿ’ ಚಿತ್ರೀಕರಣಕ್ಕೆ ಎರಡು ದಿನ ಬ್ರೇಕ್ ನೀಡಲಾಗಿತ್ತು. ಈ ಸಂದರ್ಭದಲ್ಲಿ ಸೀರಿಯಲ್ ತಂಡದ ಯಾರ ಕರೆಗಳನ್ನೂ ದಿಲೀಪ್ ಶಂಕರ್ ಅವರು ಸ್ವೀಕರಿಸಿರಲಿಲ್ಲ ಎಂದು ಧಾರವಾಹಿ ತಂಡದವರು ಮಾಹಿತಿ ನೀಡಿದ್ದಾರೆ.
ದಿಲೀಪ್ ಶಂಕರ್ ಅವರ ನಿಧನಕ್ಕೆ ಮಲಯಾಳಂ ಚಿತ್ರರಂಗದ ಅನೇಕರು ಕಂಬನಿ ಮಿಡಿದ್ದಾರೆ. ಅನೇಕ ಧಾರವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿ ದಿಲೀಪ್ ಶಂಕರ್ ಖ್ಯಾತಿ ಘಳಿಸಿದ್ದರು. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.