ಬೆಂಗಳೂರು: ಇಂದು ಸಿಲಿಕಾನ್ ಸಿಟಿಯಲ್ಲಿ 2ನೇ ದಿನದ ಕಂಬಳ (Kambala) ನಡೆಯುತ್ತಿದೆ. ಬೆಳಗ್ಗೆ ಸುಮಾರು 10 ಗಂಟೆಗೆ ಆರಂಭವಾಗುವ ಸಭಾ ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಮತ್ತೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ನವದೆಹಲಿ ಎನ್ಸಿಸಿಎಫ್ ಅಧ್ಯಕ್ಷ ವಿಶಾಲ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಇಂದು ಮಧ್ಯಾಹ್ನ ಕಂಬಳದಲ್ಲಿ ಭಾಗಿಯಾಗಲಿದ್ದಾರೆ. ಸಾಧಕ ಕುಸ್ತಿಪಟುಗಳಿಗೆ ಕಂಬಳ ಸಮಿತಿಯ ವತಿಯಿಂದ ಸನ್ಮಾನ ನಡೆಯಲಿದ್ದು, ಇಂದು ಸಂಜೆ 4 ಗಂಟೆಗೆ ಕಂಬಳ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನೆರವೇರಲಿದೆ.
ಅತ್ತ ವೇದಿಕೆ 2ರಲ್ಲಿ ನಿರಂತರವಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ. ಕರಂಗೋಲು ನೃತ್ಯ, ಗಂಡುಕಲೆ ಯಕ್ಷಗಾನ, ಆಟಿ ಕಳಂಜ, ಆಕ್ಸಿಜನ್ ಡ್ಯಾನ್ಸ್ ಟೀಮ್ ಮಂಗಳೂರು ಕಾಮಿಡಿ ಕಲಾವಿದರಿಂದ ಪ್ರದರ್ಶನ, ಮಿಮಿಕ್ರಿ, ಮಂಕಾಳಿ ನಲಿಕೆ ಇರಲಿದೆ.
ಇಂದು ಸಂಜೆ 7 ರಿಂದ ಸೆಲೆಬ್ರಿಟಿಗಳ ಸಂಗೀತ ಸಂಜೆ ಆರಂಭವಾಗಲಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸಂಗೀತ ರಸ ಸಂಜೆ ಬಳಿಕ ಇಂದು ನಾಗರಾಜ್ ಅವರ ಮ್ಯೂಸಿಕಲ್ ಪ್ರೋಗ್ರಾಂ ಇರಲಿದೆ. ಅದಾದ ನಂತರ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಅವರಿಂದ ಕೂಡ ಸಂಗೀತ ಪ್ರೋಗ್ರಾಂ ಇರಲಿದೆ.