ಪ್ರವಾಸಿ ಆಸ್ಟ್ರೇಲಿಯಾ ಎದುರು ನಡೆಯುತ್ತಿರುವ 3 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಲ್ಲಿ ಗೆದ್ದುಕೊಂಡಿರುವ ಆಸ್ಟ್ರೇಲಿಯಾ ತಂಡ, ಇದೀಗ ಜನವರಿ 3ರಿಂದ 7ರವರೆಗೆ ನಡೆಯಲಿರುವ 3ನೇ ಹಾಗೂ ಅಂತಿಮ ಟೆಸ್ಟ್ನಲ್ಲೂ ಪ್ರವಾಸಿಗರ ಸದ್ದಡಗಿಸಿ ಸರಣಿ ವೈಟ್ವಾಶ್ ಮಾಡುವ ಲೆಕ್ಕಾಚಾರ ಹಾಕಿಕೊಂಡಿದೆ. ಅಂದಹಾಗೆ ಈ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆಸೀಸ್ ಓಪನರ್ ಡೇವಿಡ್ ವಾರ್ನರ್ ಅವರ ಟೆಸ್ಟ್ ಕ್ರಿಕೆಟ್ ವೃತ್ತಿಬದುಕಿನ ಕಟ್ಟ ಕಡೆಯ ಪಂದ್ಯವಾಗಿದೆ. ಸರಣಿಗೂ ಮೊದಲೇ ನಿವೃತ್ತಿ ಘೋಷಿಸಿದ್ದ ವಾರ್ನರ್ ಎಸ್ಸಿಜಿ ಕ್ರೀಡಾಂಗಣದಲ್ಲಿ ಕೊನೇ ಬಾರಿ ರೆಡ್ ಬಾಲ್ ಕ್ರಿಕೆಟ್ ಆಡಲಿದ್ದಾರೆ. ಅಂದಹಾಗೆ ಈ ಮಹತ್ವದ ಪಂದ್ಯಕ್ಕೂ ಮುನ್ನ ಡ್ಯಾಷಿಂಗ್ ಓಪನರ್ ತಮ್ಮ ಅತ್ಯಮೂಲ್ಯ ಬ್ಯಾಗಿ ಗ್ರೀನ್ ಕ್ಯಾಪ್ ಕಳೆದುಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ವಾರ್ನರ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಮಾನ ಪ್ರಯಾಣದ ವೇಳೆ ಲಗೇಜ್ನಲ್ಲಿ ಇರಿಸಲಾಗಿದ್ದ ತಮ್ಮ ಬ್ಯಾಗಿ ಗ್ರೀನ್ (ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಆಡುವ ಆಟಗಾರರಿಗೆ ನೀಡಲಾಗುವ ಹಸಿರು ಕ್ಯಾಪ್) ಕಳುವಾಗಿರುವ ಬಗ್ಗೆ ವಾರ್ನರ್ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದು, ಯಾರಿಗಾದರೂ ಅಕಸ್ಮಾತಾಗಿ ಸಿಕ್ಕೆ ದಯವಿಟ್ಟು ಹಿಂದಿರುಗಿಸಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ. ಮೆಲ್ಬೋರ್ನ್ನಿಂದ ಸಿಡ್ನಿಗೆ ವಿಮಾನ ಪ್ರಯಾಣದ ವೇಳೆ ವಾರ್ನರ್ ತಮ್ಮ ಬ್ಯಾಗಿ ಗ್ರೀನ್ ಕಳೆದುಕೊಂಡಿದ್ದಾರೆ.
“ಬ್ಯಾಗಿ ಗ್ರೀನ್ ಬಗ್ಗೆ ನನ್ನಲ್ಲಿ ಬಹಳಾ ಭಾವುಕತೆಯಿದೆ. ಅದು ನನಗೆ ಅತ್ಯಮೂಲ್ಯ ವಸ್ತು. ಮುಂದಿನವಾರ ಕ್ರೀಡಾಂಗಣದಿಂದ ಹೊರ ನಡೆಯುವಾಗಿ ಆ ಕ್ಯಾಪ್ ನನ್ನ ಕೈಯಲ್ಲಿ ಇರಬೇಕು ಎಂಬುದು ನನ್ನ ಬಯಕೆ. ಆದರೆ, ವಿಮಾನ ಪ್ರಯಾಣದ ವೇಳೆ ನನ್ನ ಬ್ಯಾಗ್ ಅನ್ನು ಬೇರೆಯವರು ತೆಗೆದುಕೊಂಡಿದ್ದಾರೆ. ನನ್ನ ಬ್ಯಾಗ್ನಲ್ಲಿ ಕ್ಯಾಪ್ ಇಟ್ಟಿದ್ದೇನೆ. ಅದನ್ನು ಯಾರೇ ತೆಗೆದುಕೊಂಡಿದ್ದರೂ ಅದನ್ನು ಹಿಂದಿರುಗಿಸಿ. ನಿಮ್ಮ ವಿರುದ್ಧ ನಾನು ಯಾವುದೇ ಕ್ರ ತೆಗೆದುಕೊಳ್ಳುವುದಿಲ್ಲ. ನನಗೆ ಅದರೊಳಗಿರುವ ಕ್ಯಾಪ್ ಮಾತ್ರವೇ ಬೇಕು. ಬ್ಯಾಗ್ ಅನ್ನು ನೀವೇ ಇಟ್ಟುಕೊಳ್ಳಿ. ಅದನ್ನು ನಿಮಗೆ ಉಡುಗೊರೆಯಾಗಿ ನೀಡುತ್ತೇನೆ. ದಯವಿಟ್ಟು ಕ್ಯಾಪ್ ಹಿಂದಿರುಗಿಸಿ,” ಎಂದು ವಾರ್ನರ್ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.
2023ರ ಸಾಲಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಅದ್ಭುತ ಆಟವಾಡಿರುವ ಡೇವಿಡ್ ವಾರ್ನರ್, ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಶ್ರೇಷ್ಠ ಲಯ ಕಾಯ್ದುಕೊಂಡಿದ್ದಾರೆ. ಪರ್ತ್ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ವಾರ್ನರ್ ಮನಮೋಹಕ ಶತಕ ಬಾರಿಸಿದ್ದರು. ಇದೀಗ ಮೂರನೇ ಹಾಗೂ ಅಂತಿಮ ಟೆಸ್ಟ್ನಲ್ಲಿ ಶತಕ ಬಾರಿಸಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲು ಎದುರು ನೋಡುತ್ತಿದ್ದಾರೆ.
“ಒಡಿಐ ಕ್ರಿಕೆಟ್ಗೆ ನಿವೃತ್ತಿ ತೆಗೆದುಕೊಳ್ಳಬೇಕಿತ್ತು. ಈ ನಿರ್ಧಾರ ಅತ್ಯಂತ ಸುಲಭವಾಯಿತು. ಏಕೆಂದರೆ ಭಾರತದಲ್ಲಿ ಒಡಿಐ ವಿಶ್ವ ಕಪ್ ಗೆದ್ದು ಬಂದಿದ್ದೇವೆ. ಭಾರತದಲ್ಲಿ ವಿಶ್ವಕಪ್ ಗೆದ್ದಿರುವುದು ಅತ್ಯಂತ ವಿಶೇಷ. ಅದರಲ್ಲೂ ಆರಂಭದಲ್ಲಿ ಅನುಭವಿಸಿದ ಹಿನ್ನಡೆ ಮೆಟ್ಟಿನಿಂತು ಟ್ರೋಫಿ ಗೆದ್ದೆವು. ಇದು ಅದೃಷ್ಟದಿಂದ ಸಿಕ್ಕ ಗೆಲುವಲ್ಲ. ಕಷ್ಟ ಪಟ್ಟು ಗೆದ್ದಿದ್ದೇವೆ,” ಎಂದು ಒಡಿಐಗೆ ನಿವೃತ್ತಿ ಘೋಷಿಸಿದ ಬಳಿಕ ವಾರ್ನರ್ ಹೇಳಿಕೊಂಡಿದ್ದಾರೆ.