ದಾವಣಗೆರೆ:ಮನೆ ಕಳ್ಳತನ ಮಾಡಿದ್ದ ಆರೋಪಿ ಬಂಧಿಸಿರುವ ಚನ್ನಗಿರಿ ಪೊಲೀಸರು, 4.50 ಲಕ್ಷ ರೂಪಾಯಿ ಮೌಲ್ಯದ ಒಟ್ಟು 89.52 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿಯ ವಡ್ನಾಳ್ ರಾಜಣ್ಣ ಬಡಾವಣೆ ವಾಸಿ ಖಾಜಿ ಮೊಹಲ್ಲಾದ ಚಾಲಕ ಮೊಹಮ್ಮದ್ ಗೌಸ್ ಎಸ್. ಅಲಿಯಾಸ್ ಅಸ್ಲಾಂ (32) ಬಂಧಿತ ಆರೋಪಿ. 4,50,000 ರೂಪಾಯಿ ಮೌಲ್ಯದ 89.52 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಚನ್ನಗಿರಿ ನಗರದ ಕಾಳಮ್ಮನ ಬೀದಿ ವಾಸಿ ಜ್ಯೋತಿ ಮಂಡಕ್ಕಿ ವ್ಯಾಪಾರಿ ಮಂಜುನಾಥ್ ಅವರ ಪತ್ನಿ ಜ್ಯೋತಿ ಅವರು ಅಕ್ಟೋಬರ್ 14ರಂದು ಸಂಜೆ ನಾಲ್ಕು ಗಂಟೆಗೆ ಎಂದಿನಂತೆ ಮಂಡಕ್ಕಿ ಬೋಂಡಾ ವ್ಯಾಪಾರಕ್ಕೆಂದು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಈ ವೇಳೆ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಬೀರುವಿನಲ್ಲಿದ್ದ ಒಟ್ಟು 4 ಲಕ್ಷ 61 ಸಾವಿರ ರೂಪಾಯಿ ಮೌಲ್ಯದ 132 ಗ್ರಾಂ ಬಂಗಾರದ ಒಡವೆಗಳನ್ನು ಮತ್ತು 15 ಸಾವಿರ ರೂಪಾಯಿ ಮೌಲ್ಯದ 250 ಗ್ರಾಂ ಬೆಳ್ಳಿ ವಸ್ತುಗಳು, ಹಾಗೂ 1 ಲಕ್ಷ ರೂ. ನಗದು ಹಣ ಕಳವು ಮಾಡಿದ್ದಾರೆ ಎಂದು ಚನ್ನಗಿರಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ್ ಹಾಗೂ ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಪ್ರಶಾಂತ್ ಜಿ. ಮುನ್ನೋಳಿ ಅವರ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಬಿ. ನಿರಂಜನ್ ಅವರ ನೇತೃತ್ವದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಸಿಬ್ಬಂದಿಯವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಬಂಧಿತನು ಈ ಹಿಂದೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯಾಗಿದ್ದ. ಈತನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಪ್ರಶಾಂತ್ ಜಿ. ಮುನ್ನೋಳಿ, ತನಿಖಾಧಿಕಾರಿ ಬಿ. ನಿರಂಜನ, ಜಿಲ್ಲಾ ಪೊಲೀಸ್ ಕಚೇರಿಯ ಪಿ.ಎಸ್.ಐ. ಮಂಜುನಾಥ, ಎಸ್. ಕಲ್ಲೇದವರ್, ಚನ್ನಗಿರಿ ಪೊಲೀಸ್ ಠಾಣೆಯ ಎ.ಎಸ್.ಐ. ಶಶಿಧರ್ ಮತ್ತು ಸಿಬ್ಬಂದಿ ರುದ್ರೇಶ್, ಬೀರೇಶ್ ಪುಟ್ಟಕ್ಕನವರ್, ನರೇಂದ್ರ ಸ್ವಾಮಿ, ಶ್ರೀನಿವಾಸಮೂರ್ತಿ, ರಮೇಶ, ರಂಗಪ್ಪ, ರೇವಣಸಿದ್ದಪ್ಪ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ ಎಂ. ಸಂತೋಷ್ ಅವರು
ಶ್ಲಾಘಿಸಿದ್ದಾರೆ.