ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿ 20ಕ್ಕೂ ಹೆಚ್ಚು ದಿನಗಳಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾರೋಷವಾಗಿದ್ದ ದರ್ಶನ್ ಗೆ ಬಳ್ಳಾರಿ ಜೈಲಿನ ವಾಸ ನಿತ್ಯ ನರಕವಾಗಿದೆ. ಬಳ್ಳಾರಿ ಜೈಲಿನ ಅಧಿಕಾರಿಗಳು ಶಿಸ್ತಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಇದು ದರ್ಶನ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೆಲವು ‘ಸೌಲಭ್ಯ’ಗಳಿಗಾಗಿ ಪದೇ ಪದೇ ಜೈಲಧಿಕಾರಿಗಳ ಬಳಿ ದರ್ಶನ್ ಮನವಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೆ ದರ್ಶನ್ರ ಕುಟುಂಬಸ್ಥರು ಬಳ್ಳಾರಿ ಜೈಲು ಸಿಬ್ಬಂದಿ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ದರ್ಶನ್ ಬೇಡಿಕೆ ಇಟ್ಟಿರುವ ಕೆಲವು ವಸ್ತುಗಳನ್ನು ನೀಡಲು ಜೈಲು ಅಧಿಕಾರಿಗಳು ನಿರಾಕರಿಸಿರುವ ಕಾರಣ, ಮಾನವ ಹಕ್ಕು ಆಯೋಗ ದೂರು ನೀಡಲು ದರ್ಶನ್ ಕುಟುಂಬ ನಿರ್ಧರಿಸಿದೆ ಎನ್ನಲಾಗುತ್ತಿದೆ. ದರ್ಶನ್ ಪತ್ನಿ, ತಾಯಿ ಅಥವಾ ಸಹೋದರ, ಬಳ್ಳಾರಿ ಜೈಲು ಅಧಿಕಾರಿಗಳ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು ದಾಖಲಿಸಲಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ಗೆ, ವ್ಯಕ್ತಿಗೆ ಬೇಕಾದ ಕೆಲವು ಕನಿಷ್ಟ ಸೌಲಭ್ಯಗಳನ್ನು ನೀಡಲು ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲು ದರ್ಶನ್ ಕುಟುಂಬಸ್ಥರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ದರ್ಶನ್, ಬಳ್ಳಾರಿ ಜೈಲಿಗೆ ಸೇರಿದಾಗ ಶೌಚಕ್ಕೆ ಸರ್ಜಿಕಲ್ ಚೇರಿಗೆ ಮನವಿ ಮಾಡಿದ್ದರು. ಅದನ್ನು ಅಧಿಕಾರಿಗಳು ನೀಡಿದ್ದರು. ಹಾಸಿಗೆ, ದಿಂಬಿಗೆ ಬೇಡಿಕೆ ಇಟ್ಟಿದ್ದರು ಅದನ್ನು ನೀಡಲಾಗಿರಲಿಲ್ಲ. ಅದಾದ ಬಳಿಕ ಟಿವಿಗೆ ಬೇಡಿಕೆ ಇಟ್ಟರು, ಅದನ್ನು ಕೊಟ್ಟರಾದರೂ ಮೊದಲಿಗೆ ಟಿವಿ ಕೆಟ್ಟಿತ್ತಾದ್ದರಿಂದ ಅದನ್ನು ರಿಪೇರಿ ಮಾಡಿಸಿ ಕೊಡಲಾಗಿದೆ. ಟಿವಿ ಕೊಟ್ಟಿದ್ದರೂ ಸಹ ಅದರಲ್ಲಿ ಕೇವಲ ಸರ್ಕಾರಿ ಚಾನೆಲ್ಗಳನ್ನು ಮಾತ್ರವೇ ದರ್ಶನ್ಗೆ ನೋಡಲು ಅವಕಾಶ ನೀಡಲಾಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಜೈಲು ಸೇರಿದ ಆರಂಭದಿಂದಲೂ ಹಾಸಿಗೆ ಮತ್ತು ಮೆತ್ತನೆಯ ದಿಂಬಿಗೆ ಡಿಮ್ಯಾಂಡ್ ಮಾಡುತ್ತಲೇ ಇದ್ದಾರೆ. ಬಳ್ಳಾರಿ ಜೈಲಿನಲ್ಲೂ ಅದೇ ಡಿಮ್ಯಾಂಡ್ ಮುಂದುವರೆದಿದೆ ಆದರೆ ಜೈಲು ಅಧಿಕಾರಿಗಳು ವಿಶೇಷ ಹಾಸಿಗೆ ಬಿಂದು ನೀಡಲು ನಿರಾಕರಿಸಿದ್ದಾರೆ. ಇದೇ ಕಾರಣ ಇಟ್ಟುಕೊಂಡು ಇದೀಗ ದರ್ಶನ್ ಕುಟುಂಬ ಮಾನವ ಹಕ್ಕುಗಳ ಸಮಿತಿಗೆ ದೂರು ನೀಡಲು ನಿರ್ಧರಿಸಿದೆ. ಇದಲ್ಲದೆ, ದರ್ಶನ್ ಇರುವ ಜೈಲಿನ ಬಳಿ ಮಾಧ್ಯಮಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸಹ ದರ್ಶನ್ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.