ಮೈಸೂರು : ನಟ ದರ್ಶನ್ ಇದೀಗ ದಿ ಡೆವಿಲ್ ಶೂಟಿಂಗ್ಗೆ ಎಂಟ್ರಿ ಕೊಡಲಿದ್ದಾರೆ. ಮೈಸೂರಿನಲ್ಲಿ ಸ್ಥಗಿತಗೊಂಡಿದ್ದ ಶೂಟಿಂಗ್ ಇದೀಗ ಮೈಸೂರಿನಲ್ಲೇ ಪುನಾರಂಭವಾಗುತ್ತಿದೆ.. ಹೌದು, ಮೈಸೂರಿನಲ್ಲಿನ ಡೆವಿಲ್ ಚಿತ್ರದ ಶೂಟಿಂಗ್ ಮಾ.12ರಿಂದ ಆರಂಭವಾಗಲಿದ್ದು, ದರ್ಶನ್ ಭದ್ರತೆಗಾಗಿ ಭಾರೀ ಮೊತ್ತ ಹಣವನ್ನು ಚಿತ್ರತಂಡ ಖರ್ಚು ಮಾಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಆರೋಪಿ ದರ್ಶನ್ ಅವರಿಗೆ ಮಾ.12ರಿಂದ 15ರವರೆಗೆ ಮೈಸೂರಿನಲ್ಲಿ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಮಾಡಲು ಅನುಮತಿ ಸಿಕ್ಕಿದೆ. ಹೀಗಾಗಿ ಮಾ.12ರಿಂದ ಮಾ.14ರವರೆಗೆ ಸರ್ಕಾರಿ ಅತಿಥಿ ಗೃಹದಲ್ಲಿ ಚಿತ್ರತಂಡ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶೂಟಿಂಗ್ ಮಾಡಲಿದ್ದಾರೆ. ಬಳಿಕ ಮಾ.15ರಂದು ಲಲಿತಮಹಲ್ ಪ್ಯಾಲೆಸ್ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾರೆ. ಒಂದು ಪಾಳಿಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಯಂತೆ ಒಟ್ಟು 32 ಸಿಬ್ಬಂದಿ ಶೂಟಿಂಗ್ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
10 ತಿಂಗಳ ಹಿಂದೆ ಮೈಸೂರಿನಲ್ಲಿ ರೇಣುಕಾಸ್ವಾಮಿ ಪ್ರಕರಣದ ಸಂಬಂಧ ದರ್ಶನ್ ಬಂಧನವಾಗಿತ್ತು. ‘ಡೆವಿಲ್’ ಸಿನಿಮಾಗೆ ಚಿತ್ರೀಕರಣಕ್ಕೆಂದು ರ್ಯಾಡಿಸನ್ ಬ್ಲೂ ಹೋಟೆಲ್ನಲ್ಲಿ ತಂಗಿದ್ದ ವೇಳೆ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ 10 ತಿಂಗಳ ಬಳಿಕ ಮತ್ತೆ ಮೈಸೂರಿನಲ್ಲಿ ‘ದಿ ಡೆವಿಲ್’ ಶೂಟಿಂಗ್ ನಡೆಯಲಿದೆ.