ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಅವರು ಶಸ್ತ್ರಚಿಕಿತ್ಸೆ ನೆಪವೊಡ್ಡಿ ಬೇಲ್ ಮೇಲೆ ಹೊರ ಬಂದಿದ್ದಾರೆ.
ಆದರೆ ಇದುವರೆಗೂ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಹಿಂದೇಟು ಹಾಕುತ್ತಿದ್ದು, ಕಾನೂನಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಆರೋಪಿ ದರ್ಶನ್ ಜಾಮೀನು ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರುವುದು ಫಿಕ್ಸ್ ಆಗಿದೆ.
ದರ್ಶನ್ ಅವರ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರದ ಅನುಮತಿ ಬೇಕಿತ್ತು. ಕಳೆದ ನವೆಂಬರ್ 13ರಂದು ಗೃಹ ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಸಹ ಸಿಕ್ಕಿದೆ. ಸರ್ಕಾರದ ಅನುಮತಿ ಬೆನ್ನಲ್ಲೇ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಈಗಾಗಲೇ SLP ಅರ್ಜಿ ಸಿದ್ದಪಡಿಸಿದ್ದಾರೆ.
ನಟ ದರ್ಶನ್ ಮಧ್ಯಂತರ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ಗೆ ಇನ್ನೆರಡು ದಿನಗಳಲ್ಲಿ SLP ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಸ್ಪಿಪಿ ಪ್ರಸನ್ನ ಕುಮಾರ್ ಅವರಿಗೆ ಮೇಲ್ಮನವಿ ಅರ್ಜಿಯನ್ನು ತಯಾರು ಮಾಡಿಕೊಡುವ ಜವಾಬ್ದಾರಿಯನ್ನು ನೀಡಲಾಗಿದೆ. ಪ್ರಸನ್ನ ಕುಮಾರ್ ಅವರು ಅರ್ಜಿ ಸಿದ್ದಪಡಿಸಿ ಈಗಾಗಲೇ ಪೊಲೀಸ್ ಇಲಾಖೆಗೆ ನೀಡಿದ್ದಾರೆ. ಕೆಲ ದಾಖಲಾತಿಗಳ ಭಾಷಾಂತರ ಕೆಲಸ ಮುಗಿದ ಬಳಿಕ ಅಂದ್ರೆ ಮುಂದಿನ ಸೋಮವಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ದರ್ಶನ್ ಜಾಮೀನು ವಿರುದ್ಧ ಅಪೀಲು ಸಲ್ಲಿಸಲು ಸರ್ಕಾರದಿಂದ ಅನುಮತಿ ಸಿಕ್ಕಿದೆ. ಹೀಗಾಗಿ ಆದಷ್ಟು ಬೇಗ ಸುಪ್ರೀಂಕೋರ್ಟ್ಗೆ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸುತ್ತೇವೆ ಎಂದಿದ್ದಾರೆ.
ಆರೋಪಿ ದರ್ಶನ್ ಅವರು ವೈದ್ಯಕೀಯ ಚಿಕಿತ್ಸೆ ಕಾರಣಕ್ಕೆ ಬೇಲ್ ಪಡೆದಿದ್ದಾರೆ. ಆಪರೇಷನ್ ಅಂತಾ ಬೇಲ್ ಪಡೆದು ಆಪರೇಷನ್ ಮಾಡಿಸಿಕೊಂಡಿಲ್ಲ. ಬಿಜಿಎಸ್ ಆಸ್ಪತ್ರೆಯಲ್ಲಿ ಸಾಂಪ್ರದಾಯಿಕ ರೀತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ರೀತಿ ಬೇಲ್ ಪಡೆದ್ರೆ ಮುಂದೆ ಎಲ್ಲಾ ಕೈದಿಗಳಿಗೂ ಇದೇ ಉದಾಹರಣೆ ಆಗುತ್ತದೆ. ಹೀಗಾಗಿ ಮಧ್ಯಂತರ ಜಾಮೀನು ರದ್ದು ಮಾಡಲು ಮನವಿ ಮಾಡಲಾಗುತ್ತಿದೆ.
ಬೆನ್ನು ನೋವಿಗೆ ಆಪರೇಷನ್ ಆಗಬೇಕು ಅಂತಾನೆ ದರ್ಶನ್ ಅವರು ಜೈಲಿನಿಂದ ಹೊರ ಬಂದಿದ್ದಾರೆ. ಆದರೆ ಕಳೆದ 2 ವಾರಗಳಿಂದ ಸರ್ಜರಿ ಮಾಡಿಸಿಕೊಳ್ಳಲು ಹಿಂದೇಟು ಹಾಕಲಾಗುತ್ತಿದೆ. ಚಿಕಿತ್ಸೆ ಸಾಕು ಸರ್ಜರಿ ಬೇಡ ಅಂತ ದರ್ಶನ್ ಹೇಳಿದ್ದರು. ಚಿಕಿತ್ಸೆ ಸಾಕಾಗಲ್ಲ, ಸರ್ಜರಿ ಮಾಡಲೇಬೇಕು ಎಂದ ವೈದ್ಯರು ಸಲಹೆ ನೀಡಿದ್ದರು.
ಫಿಜಿಯೋಥೆರಪಿ ಜೊತೆ ಶಸ್ತ್ರ ಚಿಕಿತ್ಸೆ ಅಗತ್ಯವೆಂದು ವೈದ್ಯ ನವೀನ್ ಅಪ್ಪಾಜಿಗೌಡ ಅವರು ಸಲಹೆ ನೀಡಿದ್ದರು. ಈ ಸಲಹೆಗೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಒಪ್ಪಿಗೆ ನೀಡಿದ್ದಾರೆ. ದರ್ಶನ್ಗೆ ಏಕಾಏಕಿ ಸರ್ಜರಿ ಮಾಡಲು ಆಗಲ್ಲ. ಬೆನ್ನು ನೋವಿನ ಸಮಸ್ಯೆಯಿಂದ ಮೂಳೆ ಮೇಲಿನ ನರಕ್ಕೆ ಪೆಟ್ಟು ಆಗಿದೆ. ನರಕ್ಕೆ ಪೆಟ್ಟಾಗಿರೋದ್ರಿಂದ ಏಕಾಏಕಿ ಆಪರೇಷನ್ ಆಗಲ್ಲ. ಮೂಳೆಯ ಮೇಲಿನ ನರ ಜರುಗಿಸಿ ದರ್ಶನ್ಗೆ ಆಪರೇಷನ್ ಮಾಡಬೇಕಾಗುತ್ತದೆ.
ಸದ್ಯ ಫಿಸಿಯೋಥೆರಪಿ ಮೂಲಕ ನರವನ್ನು ಜರುಗಿಸಲಾಗ್ತಿದೆ. ನಾಳೆ ಅಥವಾ ನಾಡಿದ್ದು ದರ್ಶನ್ಗೆ ಮತ್ತೊಂದು ಸ್ಕ್ಯಾನಿಂಗ್ ಮಾಡಲಾಗುತ್ತದೆ. ವೈದ್ಯರ ರಿಪೋರ್ಟ್ ಬಳಿಕ ಸರ್ಜರಿ ದಿನಾಂಕ ಫಿಕ್ಸ್ ಆಗಲಿದೆ. ಕಳೆದ 4 ದಿನಗಳ ಹಿಂದಷ್ಟೇ ದರ್ಶನ್ ಅವರು ಸರ್ಜರಿಗೆ ಅನುಮತಿ ನೀಡಿದ್ದು, ಶೀಘ್ರದಲ್ಲೇ ಸರ್ಜರಿಗೆ ವೈದ್ಯರ ತಂಡ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ