ಹೊಸಪೇಟೆ:- ಶನಿವಾರ ಎರಡನೇ ದಿನ ಹಂಪಿ ಉತ್ಸವದ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿನಿಮಾ ನಾಯಕ ನಟ ದರ್ಶನ್ ತೂಗುದೀಪ ಮೆರಗು ತಂದರು. ದರ್ಶನ್ ನೋಡಿದ ಜನಸ್ತೋಮ ‘ಡಿ ಬಾಸ್’ ಎಂದು ಕೂಗಿ ಸಂತಸ ವ್ಯಕ್ತಪಡಿಸಿದರು.
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜಯನಗರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡು ಹಂಪಿ ಉತ್ಸವ ಆಯೋಜಿಸುವ ಸದಾವಕಾಶ ದೊರಕಿದೆ. ಇದರಿಂದ ಸಂತೋಷ ಹಾಗೂ ಖುಷಿ ಆಗುತ್ತಿದೆ ಎಂದರು.
ಸಿನಿಮಾ ನಾಯಕ ನಟ ದರ್ಶನ ಮಾತನಾಡಿ, 2018 ರಲ್ಲಿ ಹಂಪಿ ಉತ್ಸವಕ್ಕೆ ಆಗಮಿಸಿದ್ದೆ. 2024 ರಲ್ಲಿ ಮೊತ್ತೊಮ್ಮೆ ಆಗಮಿಸಿರುವುದು ಸುದೈವ. ಕನ್ನಡ ನಾಡಿನ ಚರಿತ್ರೆಯಲ್ಲಿ ಕೃಷ್ಣ ದೇವರಾಯ, ಸಂಗೊಳ್ಳಿ ರಾಯಣ್ಣ ಹಾಗೂ ಮದಕರಿ ನಾಯಕರ ಹೆಸರು ಎಂದಿಗೂ ಚಿರಸ್ಥಾಯಿಯಾಗಿದೆ. ಕೃಷ್ಣದೇವರಾಯರು ನಮ್ಮೆಲ್ಲರಿಗೂ ಪ್ರೇರಣೆ. ಅವರ ಕಾರಣದಿಂದಲೇ ಇಂದು ನಾವೆಲ್ಲರೂ ಹಂಪಿಯಲ್ಲಿ ಉತ್ಸವ ಆಚರಿಸುತ್ತಿದ್ದೇವೆ. ಕೃಷ್ಣದೇವರಾಯರ ಆತ್ಮ ನಮ್ಮೆಲ್ಲರೊಂದಿಗಿದೆ ಎಂದರು. ಸಚಿವ ಜಮೀರ್ ಅಹ್ಮದ್ ಒಳ್ಳೆಯ ವ್ಯಕ್ತಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಬಡವರಿಗೆ ನೆರವು ನೀಡಿದ್ದಾರೆ. ಬಡ ಮಕ್ಕಳ ಶಿಕ್ಷಣ ಸಹಾಯ ಒದಗಿಸಿದ್ದಾರೆ. ಅವರ ಮೇಲಿನ ಅಭಿಮಾನದಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಮೈಸೂರಿನ ದಸರಾ ಮಾದರಿಯಲ್ಲಿ ಹಂಪಿ ಉತ್ಸವವು ಜನ ಮನ ಸೂರೆಗೊಂಡಿದೆ. ಇದೇ ಮಾದರಿಯಲ್ಲಿ ಉತ್ತರ ಕರ್ನಾಟಕ ಭಾಗದ ಉತ್ಸವಗಳು ಪ್ರಸಿದ್ಧಿ ಗಳಿಸಲಿ ಎಂದರು.
ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಕ್ಫ್ ಬೋರ್ಡ್ ಅನ್ವರ್ ಪಾಷ, ಕೆ.ಎಮ್.ಎಫ್ ಅಧ್ಯಕ್ಷ ಭೀಮಾನಾಯ್ಕ್, ಹಡಗಲಿ ಶಾಸಕ ಕೃಷ್ಣನಾಯ್ಕ್, ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಹಂಪಿ ಗ್ರಾ.ಪಂ. ಅಧ್ಯಕ್ಷ ರಜನಿ ಷಣ್ಮುಖ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ,ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸದಾಶಿವಪ್ರಭು.ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು.ಬಿ.ಎಲ್, ವೇದಿಕೆ ವಿನ್ಯಾಸಕ ಹಾಗೂ ಕಲಾವಿದ ಅರುಣ್ ಸಾಗರ್, ಸಂಗೀತ ಸಂಯೋಜಕ ಸಾಧು ಕೋಕಿಲ ಇದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿದರು. ಹಂಪಿ ವಿಶ್ವ ವಿದ್ಯಾಲಯದ ಸಂಗೀತ ವಿಭಾಗದ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತ ಪಡಿಸಿದರು.