ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಗೆ ಜಾಮೀನು ಸಿಕ್ಕ ಬಳಿಕ ಕೊಂಚ ನಿರಾಳರಾಗಿದ್ದಾರೆ. ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯುತ್ತಿರುವ ದಾಸ ಇದೀಗ ಮೈಸೂರಿನಲ್ಲಿ ಪತ್ನಿಯೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.
ಕಳೆದ ವಾರ ಜಾಮೀನಿನ ಷರತ್ತಿನಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದ ದರ್ಶನ್, ಮೈಸೂರಿಗೆ ತೆರಳಲು ನ್ಯಾಯಾಲಯದ ಅನುಮತಿ ಕೋರಿದ್ದರು. ಅಂತೆಯೇ ನ್ಯಾಯಾಲಯ ಅವರಿಗೆ ಅನುಮತಿ ನೀಡಿತ್ತು. ಇದೀಗ ಮೈಸೂರಿನ ಫಾರಂ ಹೌಸ್ಗೆ ತೆರಳಿರುವ ನಟ ದರ್ಶನ್, ಅಲ್ಲಿ ಪತ್ನಿಯೊಂದಿಗೆ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದಾರೆ.
ಪ್ರತಿ ವರ್ಷ ನಟ ದರ್ಶನ್ ಸಂಕ್ರಾಂತಿ ಹಬ್ಬವನ್ನು ತಮ್ಮ ಫಾರಂ ಹೌಸ್ನಲ್ಲಿ ಆಚರಣೆ ಮಾಡುತ್ತಾರೆ. ಫಾರಂ ಹೌಸ್ನಲ್ಲಿರುವ ಎತ್ತುಗಳು, ಹಸು, ಕುದುರೆ ಇನ್ನಿತರೆ ಪ್ರಾಣಿಗಳಿಗೆ ಸ್ನಾನ ಮಾಡಿಸಿ, ಅಲಂಕಾರ ಮಾಡಿಸಿ ಅವುಗಳನ್ನು ಬೆಂಕಿ ಹಾಯಿಸುತ್ತಾರೆ. ಈ ಸಂಪ್ರದಾಯವನ್ನು ಹಲವು ವರ್ಷಗಳಿಂದಲೂ ಅವರು ಪಾಲಿಸಿಕೊಂಡು ಬಂದಿದ್ದಾರೆ. ಈ ವರ್ಷವೂ ಆ ಸಂಪ್ರದಾಯವನ್ನು ಮುಂದುವರೆಸಿದ್ದಾರೆ.
ಈ ಬಾರಿ ದರ್ಶನ್ಗೆ ಆರೋಗ್ಯ ಸರಿಯಿಲ್ಲವಾದ ಕಾರಣ ಪ್ರಾಣಿಗಳ ಶುಚಿ ಕಾರ್ಯದಲ್ಲಿ ದರ್ಶನ್ ತೊಡಗಿಕೊಂಡಂತಿಲ್ಲ. ಆದರೆ ಹಬ್ಬ ಆಚರಣೆ ಮಾಡಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರುಗಳು ಫಾರಂ ಹೌಸ್ನಲ್ಲಿ ಪ್ರಾಣಿಗಳನ್ನು ಆರೈಕೆ ಮಾಡುತ್ತಿರುವ ಚಿತ್ರ ಇದೀಗ ವೈರಲ್ ಆಗಿದೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಇಬ್ಬರೂ ಸಹ ಚಿತ್ರದಲ್ಲಿ ಮುಖ ತೋರಿಸಿಲ್ಲ.