ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ದೇಶದೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಅಂತೆಯೇ ನಟ ದರ್ಶನ್ ಕೂಡ ನೋವು ಮರೆತು ಕುಟುಂಬ ಸದಸ್ಯರ ಜೊತೆ ಸೇರಿ ತಮ್ಮ ಫಾರ್ಮ್ ಹೌಸ್ ನಲ್ಲಿ ಸಂಕ್ರಾಂತಿ ಆಚರಿಸಿದ್ದಾರೆ. ಕುದುರೆಯ ಜೊತೆಗಿರುವ ಫೋಟೋ ಹಂಚಿಕೊಂಡಿರುವ ನಟ ದರ್ಶನ್ ಅಭಿಮಾನಿಗಳಿಗೆ ಸಂಕ್ರಾಂತಿ ಶುಭಾಶಯ ತಿಳಿಸಿದ್ದಾರೆ.
‘ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ. ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ’ ಎಂದು ದರ್ಶನ್ ಅವರು ಅಭಿಮಾನಿಗಳಿಗೆ ಸಂಕ್ರಾಂತಿಯ ಶುಭಾಶಯ ತಿಳಿಸಿದ್ದಾರೆ.
ಕಳೆದ ವರ್ಷ ದರ್ಶನ್ ಅವರ ಪಾಲಿಗೆ ತುಂಬ ಕಷ್ಟಕರ ಆಗಿತ್ತು. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ಏಳೂ ತಿಂಗಳ ಕಾಲ ಜೈಲು ವಾಸ ಅನುಭವಿಸಿ ಬಂದಿದ್ದರು. ಇದೀಗ ರೆಗ್ಯೂಲರ್ ಬೇಲ್ ಪಡೆದು ಹೊರ ಬಂದಿರುವ ದರ್ಶನ್ ಇದೇ ಮೊದಲ ಭಾರಿಗೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
2024ರಲ್ಲಿ ದರ್ಶನ್ ಹಲವು ಕಹಿ ಘಟನೆಗಳು ಎದುರಿಸಿದರು. ಕೊಲೆ ಆರೋಪ ಎದುರಾಗಿದ್ದರಿಂದ ಸಿನಿಮಾ ಕೆಲಸಗಳನ್ನು ಬಿಟ್ಟು ಪೊಲೀಸ್ ಸ್ಟೇಷನ್, ಕೋರ್ಟು, ಜೈಲು, ಆಸ್ಪತ್ರೆ ಸುತ್ತುವಂತಾಯಿತು. ಆದರೆ 2025ರ ವರ್ಷದಲ್ಲಿ ಎಲ್ಲ ವಿಘ್ನಗಳು ನಿವಾರಣೆ ಆಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.