ಹಾಸನ : ಮಾಜಿ ಸಚಿವ ಬಿ.ಶಿವರಾಂ ಅವರು ಸಾರ್ವಜನಿಕವಾಗಿ ನೀಡುತ್ತಿರುವ ಅನಗತ್ಯ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ವರ್ಛಸ್ಸಿಗೆ ಧಕ್ಕೆ ತರುವಂಥದ್ದಾಗಿದ್ದು ಈ ಬಗ್ಗೆ ಹೈ ಕಮಾಂಡ್ಗೆ ದೂರು ನೀಡುತ್ತಿದ್ದೇನೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದರು.
ಪಕ್ಷದ ಸಭೆಗಳಲ್ಲಿ ಚರ್ಚಿಸಬೇಕಾದ ಕೆಲವು ವಿಚಾರಗಳನ್ನು ಅವರು ಸುದ್ದಿಗೋಷ್ಠಿ ಮೂಲಕ ಹೇಳುವ ಅಗತ್ಯವಾದರೂ ಏನು ಎಂಬುದೇ ಅರ್ಥವಾಗುತ್ತಿಲ್ಲ. ನನ್ನ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿರುವ ಜತೆಗೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ಕಾರ್ಯಕರ್ತರ ನಡುವೆ ಒಡಕು ಸೃಷ್ಟಿಸಿದಂತಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಐಸಿಸಿ ಹಾಗೂ ಕೆಪಿಸಿಸಿಗೆ ದೂರು ನೀಡಲು ನಿರ್ಧರಿಸಿದ್ದೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅರಸೀಕೆರೆ ಕ್ಷೇತ್ರದ ವೀರಶೈವ ಮುಖಂಡ ಶಶಿಧರ್ ಸ್ಥಾನಮಾನದ ಬಗ್ಗೆ ಕಾಳಜಿಯ ಮಾತನಾಡುತ್ತಿರುವ ಬಿ.ಶಿವರಾಂ ಅವರು ತಮ್ಮದೇ ಬೇಲೂರು ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆ ವೇಳೆ ಗ್ರಾನೈಟ್ ರಾಜಶೇಖರ್ ಅವರಿಗೆ ಸ್ಥಾನ ಬಿಟ್ಟುಕೊಟ್ಟು ಜಿಲ್ಲಾ ಕೇಂದ್ರದಿAದ ಸ್ಪರ್ಧೆ ಮಾಡಬಹುದಿತ್ತು.
ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ. ಅವರನ್ನು ಒಡೆಯುವ ಕೆಲಸ ಮಾಡುವುದು ಸರಿಯಲ್ಲ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಮಯದಲ್ಲಿ ಸ್ವ ಪಕ್ಷದ ವಿರುದ್ಧವಾಗಿಯೇ ಅವರು ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು ಎಂದರು.
ಮುಖಂಡ ಶಶಿಧರ್ ಅವರಿಗೆ ನಿಗಮ, ಮಂಡಳಿಯಲ್ಲಿ ಸ್ಥಾನ ಕಲ್ಪಿಸುವ ವಿಚಾರದಲ್ಲಿ ನನ್ನ ತಕರಾರಿಲ್ಲ. ಆದರೆ ನಮ್ಮ ವರಿಷ್ಠರು ಪಕ್ಷ ಸಂಘಟನೆ ಹಾಗೂ ಆಡಳಿತ ಯಂತ್ರ ಸುಧಾರಣೆ ಉದ್ದೇಶದಿಂದ ರಾಜ್ಯ ಮಟ್ಟದ ಸ್ಥಾನಗಳನ್ನು ಹಿರಿಯ ಶಾಸಕರಿಗೆ ಹಾಗೂ ಜಿಲ್ಲಾ ಮಟ್ಟದ ಸ್ಥಾನಗಳನ್ನು ಕಾರ್ಯಕರ್ತರಿಗೆ ಹಂಚಿಕೆ ಮಾಡಬೇಕು ಎಂಬ ಈ ತೀರ್ಮಾನ ಮಾಡಿದ್ದಾರೆ. ಅಂತೆಯೇ ಈಗಾಗಲೇ ಚರ್ಚೆಗಳಾಗುತ್ತಿದ್ದು ನನ್ನ ಹೆಸರೂ ಪ್ರಸ್ತಾಪವಾಗಿದೆ. ಸ್ಥಾನ ಹಂಚಿಕೆಯಲ್ಲಿ ನನ್ನ ಕೋಟಾ, ಶಶಿಧರ್ ಕೋಟಾ ಬೇರೆ ಬೇರೆಯಾಗಿದೆ. ಈ ಬಗ್ಗೆ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಶಿವರಾಂ ಅವರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ನಾನು ಅರಸೀಕೆರೆಯಿಂದ ಹೊರ ಬಂದು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ ಎಂದು ಬಿ.ಶಿವರಾಂ ಆರೋಪಿಸಿದ್ದಾರೆ.
ಆದರೆ ಅದು ನನ್ನ ವ್ಯಾಪ್ತಿಗೆ ಒಳಪಡುವುದಿಲ್ಲ. ನಾನು ಅರಸೀಕೆರೆ ಕ್ಷೇತ್ರದ ಶಾಸಕ. ನನ್ನ ಕಾರ್ಯ ವ್ಯಾಪ್ತಿ ಅಲ್ಲಿಗೆ ಮಾತ್ರ ಸೀಮಿತಾಗಿದೆ. ಪಕ್ಷ ನನಗೆ ಪಕ್ಷ ಸಂಘಟನೆ ಜವಾಬ್ದಾರಿ ವಹಿಸಿದರೆ ಎಲ್ಲ ತಾಲೂಕುಗಳಿಗೂ ತೆರಳ ಅಲ್ಲಿನ ಕಾರ್ಯಕರ್ತರನ್ನು ಭೇಟಿ ಮಾಡಿ ಮಾತನಾಡಬಹುದು. ಅದನ್ನು ಬಿಟ್ಟು ನಾನಾಗಿಯೇ ಸುತ್ತಾಡಿದರೆ ಜನ ನನ್ನನ್ನು ಹೇಗೆ ಸ್ವೀಕರಿಸಬಹುದು ಎಂದು ಪ್ರಶ್ನಿಸಿದರು.
ನಮ್ಮ ಪಕ್ಷದಲ್ಲಿ ಲಿಂಗಾಯಿತ ಮುಖಮಡರಿಗೆ ಸ್ಥಾನಮಾನ ಕಲ್ಪಿಸೇಕು ಎಂಬ ಚರ್ಚೆಗಳಾದರೆ ಅದನ್ನು ವಿರೋಧಿಸಲು ನಾನ್ಯಾರು, ಎಲ್ಲ ಜಾತಿ, ಜನಾಂಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ಎಲ್ಲ ಪಕ್ಷದವರ ಧರ್ಮ. ಅದಕ್ಕೆ ನನ್ನ ಸಹಮತವೂ ಇದೆ. ಶಿವಲಿಂಗೇಗೌಡರೇ ಲೋಕಸಭೆ ಚುನಾವಣೆಗೆ ಸೂಕ್ತ ಅಭ್ಯರ್ಥಿ ಎಂದು ಶಿವರಾಂ ಹೇಳಿದ ಎರಡೇ ದಿನಗಳಲ್ಲಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ವಲಸಿಗರು, ನೀತಿಗೆಟ್ಟವರು ಎಂದು ಪರೋಕ್ಷವಾಗಿ ತೇಜೋವಧೆ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರಲು ವಲಸಿಗರೂ ಮುಖ್ಯ ಕಾರಣರು ಎಂಬುದು ಸತ್ಯ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಚೆಲುವನಾರಾಯಣ ಸ್ವಾಮಿ, ಕೆ.ಎನ್.ರಾಜಣ್ಣ ಒಳಗೊಂಡು ಹಲವು ಸಚಿವರು ಬೇರೆ ಪಕ್ಷದಿಂದಲೇ ಬಂದವರು ಎಂಬುದನ್ನು ಶಿವರಾಂ ಮರೆತಿರಬಹುದು ಎಂದು ಕಿಡಿ ಕಾರಿದರು.
ಎಂಪಿ ಅಭ್ಯರ್ಥಿ ಆಕಾಂಕ್ಷಿಯಲ್ಲ:
ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿಲ್ಲ. ಅದಕ್ಕೆ ನನ್ನ ಕ್ಷೇತ್ರದ ಜನರು ಒಪ್ಪುವುದೂ ಇಲ್ಲ. ನಾನು ಏನೇ ನಿರ್ದಾರ ಕೈಗೊಳ್ಳುವುದಾದರೂ ನನ್ನ ಜನರ ಅನುಮತಿ ಪಡೆಯುತ್ತೇನೆ. ಅದೇ ಕಾರಣದಿಂದ ಅರಸೀಕೆರೆ ಜನರು ನನ್ನನ್ನು ನಾಲು ಬಾರಿ ಶಾಸಕನನ್ನಾಗಿ ಮಾಡಿದ್ದಾರೆ. ಕ್ಷೇತ್ರ ಬಿಟ್ಟು ಎಲ್ಲಿಗೂ ಹೋಗಲು ಮನಸ್ಸಿಲ್ಲ. ಬಿ.ಶಿವರಾಂ ಅವರಿಗೆ ಸ್ಪರ್ಧಿಸುವ ಆಕಾಂಕ್ಷೆ ಇದ್ದರೆ ಟಿಕೆಟ್ ತರಲಿ. ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡೋಣ. ಅದನ್ನು ಬಿಟ್ಟು ಅನಗತ್ಯ ಚರ್ಚೆಗಳು ಬೇಡ ಎಂದರು.
ನಾಫೆಡ್ ಖರೀದಿ ವರ್ಷವಿಡೀ ನಡೆಯಲಿ:
ವರ್ಷದ ಎಲ್ಲ ಕಾಲದಲ್ಲೂ ತೆಂಗು ಫಸಲು ಕೊಡುತ್ತದೆ. ಆದರೆ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಗೆ ಕೇಂದ್ರ ಸರ್ಕಾರ ಕೇವಲ ನಾಲ್ಕು ತಿಂಗಳ ಕಾಲಮಿತಿ ವಿಧಿಸಿರುವುದು ಅಸಮಾಧಾನ ತಂದಿದೆ. ವರ್ಷವಿಡೀ ನಾಫೆಡ್ ಮೂಲಕ ಖರೀದಿ ನಡೆಸಿದರೆ ಮಾರುಕಟ್ಟೆ ದರ ಕುಸಿತವಾದಾಗ ರೈತರು ಈ ಕೇಂದ್ರಗಳ ಮೂಲಕ ಕೊಬ್ಬರಿ ಮಾರಾಟ ಮಾಡಲು ಅನುಕೂಲವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಪರಿಹಾರ ಹಂಚಿಕೆಯಲ್ಲಿ ತಾರತಮ್ಯ:
ಪ್ರವಾಹ, ಬರಗಾಲ ಪರಿಸ್ಥಿತಿ ನಿಭಾಯಿಸಿ ಸಂತ್ರಸ್ಥರಿಗೆ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಕರ್ನಾಟಕದಿಂದ ಸುಮಾರು ೪ ಲಕ್ಷ ಕೋಟಿ ರೂಪಾಯಿಯಷ್ಟು ತೆರಿಗೆ ಹಣ ಜತೆಗೆ ಶೇ.೧೭ ರಷ್ಟು ಜಿಎಸ್ಟಿ ಕೇಂದ್ರಕ್ಕೆ ನೀಡುತ್ತಿದ್ದರೂ ಬೆಳೆ ಪರಿಹಾರದ ಬಿಡಿಗಾಸು ಹಣವನ್ನೂ ಈ ವರೆಗೆ ಬಿಡುಗಡೆ ಮಾಡಿಲ್ಲ. ಕೆಲವು ರಾಜ್ಯಗಳಿಗಷ್ಟೇ ಹಣ ಬಿಡುಗಡೆ ಮಾಡಿ ತೆರಿಗೆ ಹಣವನ್ನು ಮಾತ್ರ ಪಡೆಯಲು ಆಸ್ತಿ ವಹಿಸುವುದಾದರೆ ಒಕ್ಕೂಟ ವ್ಯವಸ್ಥೆ ಇದ್ದು ಪ್ರಯೋಜನವೇನು, ಕೇಂದ್ರ ಸರ್ಕಾರ ಯಾವ ರೀತಿ ಆಡಳಿತ ನಡೆಸುತ್ತಿದೆ ಎಂಬ ಅನುಮಾನ ಮೂಡುತ್ತದೆ ಎಂದರು.
ಸರ್ಕಾರದಿಂದ ಆದೇಶ ಬಂದಿಲ್ಲ:
ರಾಜ್ಯ ಸರ್ಕಾರ ನಿಗಮ, ಮಮಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ನನಗೆ ಗೃಹ ಮಂಡಳಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ ಎಂಬ ಬಗ್ಗೆ ಸುದ್ದಿಯಾಗಿದೆ. ಆದರೆ ಅಧಿಕೃತ ಆದೇಶಪತ್ರ ಈ ವರೆಗೆ ಕೈ ಸೇರಿಲ್ಲ. ನನ್ನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಂದರ್ಭ ಉತ್ತಮ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಿದ್ದರು ಅಂತೆಯೇ ನಿಗಮ, ಮಂಡಳಿಯಲ್ಲಿ ಸ್ಥಾನ ಸಿಗುವ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನವೂ ಲಭಿಸುವ ನಿರೀಕ್ಷೆ ಹೊಂದಿದ್ದೇನೆ. ಈ ವಿಚಾರದಲ್ಲಿ ಯಾವುದೇ ಅಸಮಾದಾನಗಳಿಲ್ಲ ಎಂದು ಸ್ಪಷ್ಟಪಡಿಸಿದರು.