ಪಾಟ್ನಾ: ಸಾರ್ವಜನಿಕರ ಮುಂದೆಯೇ ಪೊಲೀಸರು (Police) ದಲಿತ ಮಹಿಳೆಯೊಬ್ಬರನ್ನು ಥಳಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ಬಿಹಾರದ ಸೀತಾಮರ್ಹಿಯಲ್ಲಿ ನಡೆದಿದೆ. ಸಮವಸ್ತ್ರದಲ್ಲಿಯೇ ಪೋಲೀಸರು ಹೊಡೆಯುತ್ತಿರುವುದನ್ನು ಅಲ್ಲೇ ಇದ್ದ ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಬಳಿಕ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋವನ್ನು ವೀಕ್ಷಿಸಿದ ನೆಟ್ಟಿಗರು, ಪೊಲೀಸರ ವರ್ತನೆಯ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿ ಕಳವಳ ವ್ಯಕ್ತಪಡಿಸಿದ್ದಾರೆ. ಮಹಿಳೆಯನ್ನು ಥಳಿಸಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
Dalit Woman Beaten By Cop In Bihar pic.twitter.com/AMBuBxC1wy
— Harsh Tyagii (@tyagiih5) January 1, 2024
ಇತ್ತ ಪ್ರಕರಣ ವಿವಾದದ ಕಿಡಿ ಹೊತ್ತಿಕೊಳ್ಳುತ್ತಿದ್ದಂತೆಯೇ ಪೊಲೀಸರು ಸಮಜಾಯಿಷಿ ನೀಡಿದ್ದಾರೆ. ಅಪಹರಣ ಪ್ರಕರಣದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸುತ್ತಿದ್ದರು ಎಂದಿದ್ದಾರೆ.
ಏನಿದು ಘಟನೆ..?: ಸುರಸಂದ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಜ್ಕಿಶೋರ್ ಸಿಂಗ್ ಮಹಿಳೆಯನ್ನು ರಸ್ತೆಯಲ್ಲಿಯೇ ದೊಣ್ಣೆಯಿಂದ ಥಳಿಸಿದ್ದಾರೆ. ಸುರಸಂದ್ ಮಾರುಕಟ್ಟೆಯಲ್ಲಿ ನಡೆದ ಗಲಾಟೆಯಿಂದ ಕೋಪಗೊಂಡ ಪೊಲೀಸ್ ಅಧಿಕಾರಿ, ಮಹಿಳೆಯನ್ನು ಅನೇಕ ಬಾರಿ ದೊಣ್ಣೆಯಿಂದ ಥಳಿಸಿದ್ದಾರೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಸೀತಾಮರ್ಹಿ ಪೊಲೀಸರು ಹೇಳಿದ್ದು,
ರಸ್ತೆಯಲ್ಲಿ ಜಗಳವಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಬೇರ್ಪಡಿಸುವ ಉದ್ದೇಶದಿಂದ ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ. ಬಾಲಕಿಯನ್ನು ರಕ್ಷಿಸಲಾಯಿತು. ಆದರೆ ಎರಡೂ ಕಡೆಯವರು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಠಾಣೆ ಆವರಣದಲ್ಲಿ ತಮ್ಮತಮ್ಮಲ್ಲೇ ಜಗಳವಾಡಿದರು. ಇದರಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು ಎಂದು ಸ್ಪಷ್ಟಪಡಿಸಿದರು.