ಪ್ರಾಣಿಗಳ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ನಟ ದರ್ಶನ್. ಸ್ವತಃ ಪ್ರಾಣಿ ಪ್ರಿಯರೂ ಆಗಿರುವ ದರ್ಶನ್, ಮೈಸೂರು ಮೃಗಾಲಯ ಸೇರಿದಂತೆ ನಾನಾ ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಅವರು ದತ್ತು ಪಡೆದಿದ್ದಾರೆ. ಜೊತೆಗೆ ಮನೆಯಲ್ಲೂ ಹಲವು ರೀತಿಯ ಪ್ರಾಣಿ ಪಕ್ಷಿಗಳನ್ನು ಸಾಕಿದ್ದಾರೆ. ಅದರಲ್ಲೂ ಆನೆಗಳೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಹಾಗಾಗಿಯೇ ತಮ್ಮ ಕಾಟೇರ ಸಿನಿಮಾವನ್ನು ಹುತಾತ್ಮ ಆನೆ (Elephant) ಅರ್ಜುನ್ (Arjun) ಗೆ ಅರ್ಪಿಸಿದ್ದಾರೆ.
ಸಿನಿಮಾ ಶುರುವಾಗುವ ಮುನ್ನ ‘ನಾಡ ದೇವಿ ಚಾಮುಂಡಿಯ ಅಂಬಾರಿಯನ್ನು ಹೊತ್ತು ದಸರೆಯ ವೈಭವವನ್ನು ಜಗತ್ತಿನಾದ್ಯಂತ ಕಣ್ತುಂಬಿಸಿ ಕಣ್ಮರೆಯಾದ ದೃತ್ಯ ಮತ್ತು ದೈವ ಜೀವ ಅರ್ಜುನ ಇದಕ್ಕೆ ನಮ್ಮ ಕಾಟೇರ ಚಿತ್ರ ಅರ್ಪಣೆ’ ಎಂದು ಬರೆಯಲಾಗಿದೆ. ಈ ಮೂಲಕ ಅರ್ಜುನ್ ಗೆ ಗೌರವ ನೀಡಲಾಗಿದೆ.
ದರ್ಶನ್ ಅಭಿನಯದ ಬಹುನಿರೀಕ್ಷಿತ ಕಾಟೇರ ಸಿನಿಮಾ (Kaatera Cinema) ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಚಕ್ರವರ್ತಿಯ ಅಬ್ಬರ ಶುರುವಾಗಿದೆ. ಸಿನಿಮಾ ಥಿಯೇಟರ್, ಮಾಲ್ಗಳ ಮುಂದೆ ಕಿಕ್ಕಿರಿದು ನಿಂತಿರುವ ಅಭಿಮಾನಿಗಳು (Darshan Fans) ದರ್ಶನ್ ಕಟೌಟ್ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಡಿಬಾಸ್ ಡಿಬಾಸ್ ಎಂದು ಜಯಘೋಷ ಹಾಕುತ್ತಾ ಹುಚ್ಚೆದ್ದು ಕುಣಿಯುತ್ತಿದ್ದಾರೆ.