ಹುಬ್ಬಳ್ಳಿ:- ಅವರು ಅಯ್ಯಪ್ಪನ ಮಾಲೆ ಧರಿಸಿದರು. ರಾತ್ರಿ ದೇವರ ಜಪ ಮಾಡಿ ಮಲಗಿದವರಿಗೆ ದೊಡ್ಡ ಅನಾಹುತವೇ ಸಂಭವಿಸಿಬಿಡ್ತು.
ಅಂದು ಸಿಲಿಂಡರ್ ಸ್ಪೋಟವಾಗಿ ಒಂಬತ್ತು ಮಾಲಾಧಾರಿಗಳು ಗಂಭೀರ ಗಾಯಗೊಂಡಿದ್ದರು. ಇದೀಗ ಸಿಲಿಂಡರ್ ಸ್ಫೋಟ ದುರಂತ ಇಬ್ಬರ ಜೀವ ಬಲಿ ಪಡೆದಿದೆ. ಉಣಕಲ್ನ ದುರಂತದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಏಳು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (18) ಮೃತಪಟ್ಟ ಮಾಲಾಧಾರಿಗಳು. ಇವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇನ್ನುಳಿದ 7 ಮಂದಿ ಅಯ್ಯಪ್ಪ ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಅಯ್ಯಪ್ಪ ಮಾಲಾಧಾರಿಗಳಿಗೆ ಕಿಮ್ಸ್ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಈ ನಡುವೆ, ಹೆಚ್ಚಿನ ಚಿಕಿತ್ಸೆ ಕೂಡಿಸಲು ಸಚಿವ ಸಂತೋಷ್ ಲಾಡ್ ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.