ಬೆಂಗಳೂರು:– ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಬರ್ ಖದೀಮರ ಕಾಟ ಜೋರಾಗಿದೆ. ಅದರ ಭಾಗವಾಗಿ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ವೈದ್ಯ ಮತ್ತು ಇಬ್ಬರು ಸಾಫ್ಟ್ವೇರ್ ಎಂಜಿನಿಯರ್ಗಳಿಗೆ ಸೈಬರ್ ಅಪರಾಧಿಗಳು 63 ಲಕ್ಷ ರೂಪಾಯಿಗಳನ್ನು ವಂಚಿಸಿದ ಪ್ರಕರಣಗಳು ಬೆಳಕಿಗೆ ಬಂದಿವೆ.
ಕೋರಮಂಗಲದ ನಿವಾಸಿಯಾಗಿರುವ ವೈದ್ಯೆ ಗುರುವಾರ ಆಗ್ನೇಯ ಸೈಬರ್ ಕ್ರೈಂ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಕೊರಿಯರ್ ಕಂಪನಿಯೊಂದರ ಕಾರ್ಯನಿರ್ವಾಹಕ ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿಯಿಂದ ತನಗೆ ಕರೆ ಬಂದಿದ್ದು, ತನ್ನ ಹೆಸರಿನಲ್ಲಿ ನಿಷೇಧಿತ ವಸ್ತುಗಳ ಪಾರ್ಸೆಲ್ ಇದೆ ಎಂದು ತಿಳಿಸಿದ್ದಾರೆ.
ಬಳಿಕ ಅಪ್ಲಿಕೇಶನ್ವೊಂದನ್ನು ಡೌನ್ಲೋಡ್ ಮಾಡಲು ಹೇಳಿದರು. ಆಘಾತಕ್ಕೊಳಗಾದ ಅವರು, ಕರೆ ಮಾಡಿದ ಆರೋಪವನ್ನು ನಿರಾಕರಿಸಲು ಪ್ರಯತ್ನಿಸಿದರು. ಈ ವೇಳೆ ಸೈಬರ್ ವಂಚಕರು ಆಕೆಯ ಬ್ಯಾಂಕ್ ಖಾತೆಗಳನ್ನು ಕ್ರಾಸ್ ಚೆಕ್ ಮಾಡುವ ನೆಪದಲ್ಲಿ ವಿವರಗಳನ್ನು ಪಡೆದುಕೊಂಡು 7.6 ಲಕ್ಷ ವರ್ಗಾಯಿಸಿದ್ದಾರೆ.
ತನ್ನ ಖಾತೆಯಿಂದ ಹಣ ಕಡಿತಗೊಂಡ ಬಗ್ಗೆ ಮೆಸೇಜ್ ಬಂದಾಕ್ಷಣವೇ ಅಪರಿಚಿತ ವ್ಯಕ್ತಿಯನ್ನು ಸಂಪರ್ಕಿಸಲು ಯತ್ನಿಸಿದಾಗ ಸಾಧ್ಯವಾಗಲಿಲ್ಲ. ಈ ವೇಳೆ ತಾನು ವಂಚಕರ ವಂಚನೆಯ ಬಲೆಗೆ ಬಿದ್ದಿರುವುದು ಅವರಿಗೆ ತಿಳಿದುಬಂದಿದೆ.
ಅದೇ ರೀತಿ, ಬೇಗೂರಿನ 48 ವರ್ಷದ ವ್ಯಕ್ತಿಯೊಬ್ಬರು ನವೆಂಬರ್ 17 ರ ಶುಕ್ರವಾರದಂದು ಆಗ್ನೇಯ ಪೊಲೀಸರಿಗೆ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಕೊರಿಯರ್ ಕಂಪನಿಯ ಎಕ್ಸಿಕ್ಯೂಟಿವ್ ಎಂದು ಹೇಳಿಕೊಂಡು ತನ್ನ ಖಾತೆಯ ಡಿಟೈಲ್ಸ್ ಪಡೆದು 29.6 ಲಕ್ಷ ರೂ. ವಂಚಿಸಿದ್ದಾಗಿ ದೂರು ನೀಡಿದ್ದಾರೆ.
ನಿಮ್ಮ ಹೆಸರಿನಲ್ಲಿ ಮುಂಬೈನಿಂದ ತೈವಾನ್ಗೆ ಪಾರ್ಸೆಲ್ ಇದ್ದು ಅದರಲ್ಲಿ ನಿಷೇಧಿತ ವಸ್ತುಗಳು ಇರುವುದಾಗಿ ಕರೆ ಮಾಡಿದ ವ್ಯಕ್ತಿ ತಿಳಿಸುತ್ತಾನೆ. ಅಲ್ಲದೆ, ತನ್ನ ಆಧಾರ್ ವಿವರಗಳನ್ನು ಶಂಕಿತರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಮತ್ತು ಪರಿಶೀಲನೆಗಾಗಿ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳಿದ್ದು, ಈ ವ್ಯಕ್ತಿ ವಿವರಗಳನ್ನು ನೀಡಿದ್ದಾರೆ.
ಬ್ಯಾಂಕ್ ಖಾತೆ ಡಿಟೈಲ್ಸ್ ಸಿಕ್ಕ ಕೂಡಲೇ ಬ್ಯಾಂಕ್ ಖಾತೆಯಲ್ಲಿದ್ದ ಉಳಿತಾದಯ ಹಣವೆಲ್ಲಾ ಖಾಲೆಯಾಗಿ ವಂಚಕರ ಖಾತೆ ತುಂಬಿದೆ. ಈ ಹಿಂದೆ ದೇವರಬೀಸನಹಳ್ಳಿಯ ಸಾಫ್ಟ್ವೇರ್ ಇಂಜಿನಿಯರ್ ಕೂಡ ಇದೇ ಮಾದರಿಯಲ್ಲಿ ವಂಚನೆಗೊಳಗಾಗಿದ್ದರು.
ಕರೆ ಮಾಡಿದವರು ಆರಂಭದಲ್ಲಿ ಕೊರಿಯರ್ ಕಂಪನಿಯ ಕಾರ್ಯನಿರ್ವಾಹಕ ಎಂದು ಪರಿಚಯಿಸಿಕೊಂಡರು. ನಂತರ, ಅವರ ಸಹಚರರು ಮುಂಬೈ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ತನಗೆ ಕರೆ ಮಾಡಿ ಪಾರ್ಸೆಲ್ನಲ್ಲಿ ನಿಷೇಧಿತ ವಸ್ತುಗಳನ್ನು ಇರುವುದಾಗಿ ಹಾಗೂ ಮನಿಲ್ಯಾಂಡರಿಂಗ್ ಆರೋಪಿಸಿ ಪರಿಶೀಲನೆಯ ನೆಪದಲ್ಲಿ ತನ್ನ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದು 26.2 ಲಕ್ಷವನ್ನು ವರ್ಗಾವಣೆ ಮಾಡಿದ್ದಾನೆ ಎಂದು ವೈಟ್ಫೀಲ್ಡ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.