ಬೆಂಗಳೂರು:- ಜೆಡಿಎಸ್ ಕಚೇರಿ ಜೆಪಿ ಭವನಕ್ಕೆ ʼಕರೆಂಟ್ ಕಳ್ಳ ಕುಮಾರಸ್ವಾಮಿʼ, ʼವಿದ್ಯುತ್ ಕಳ್ಳ ಕುಮಾರಸ್ವಾಮಿʼ ಎನ್ನುವ ಬರಹವುಳ್ಳ ಅವಹೇಳನಕಾರಿ ಪೋಸ್ಟರ್ ಅಂಟಿಸಿರುವುದು ಕಂಡುಬಂದಿದೆ.
ಮನೆ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಆರೋಪದಲ್ಲಿ ಮಾಜಿ ಸಿಎಂ ಮೇಲೆ ಬೆಸ್ಕಾಂ ಜಾಗೃತ ದಳ ಪ್ರಕರಣದ ದಾಖಲಿಸಿಕೊಂಡಿತ್ತು. ಹೀಗಾಗಿ ಎಚ್ಡಿಕೆ ಅವರನ್ನು ವ್ಯಂಗ್ಯವಾಡಲು ಕಿಡಿಗೇಡಿಗಳು ಪೋಸ್ಟರ್ ಅಂಟಿಸಿದ್ದಾರೆ.
ಕುಮಾರಸ್ವಾಮಿ ಕರೆಂಟ್ 200 ಯುನಿಟ್ ಮಾತ್ರ ಉಚಿತ ನೆನಪಿಟ್ಟುಕೊಳ್ಳಿ, ಹೆಚ್ಚು ಕದಿಯಬೇಡಿ. ಕರೆಂಟ್ ಕದ್ದರೂ ಎಚ್ಡಿಕೆ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು ಎಂದು ಪೋಸ್ಟರ್ಗಳಲ್ಲಿ ಬರೆಯಲಾಗಿದೆ. ಈ ಬಗ್ಗೆ ಆಕ್ರೋಶ ಹೊರಹಾಕಿರುವ ಜೆಡಿಎಸ್ ಕಾರ್ಯಕರ್ತರು, ಮಾಜಿ ಸಿಎಂ ಎಚ್ಡಿಕೆಗೆ ಅವಮಾನ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಈ ಪೋಸ್ಟರ್ಗಳನ್ನು ಅಂಟಿಸಿದ್ದಾರೆ ಎಂದು ಆರೋಪಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.