ಹುಬ್ಬಳ್ಳಿ:ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು, ಪ್ರತಿಪಕ್ಷ ನಾಯಕರೊಂದಿಗೆ, ವಿರೋಧ ಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ ಸಿ.ಟಿ ರವಿ ಅವರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದರು.
ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ: ಸಭಾಪತಿ ಹೊರಟ್ಟಿ ಅಚ್ಚರಿ ಹೇಳಿಕೆ
ಈ ಸಂದರ್ಭದಲ್ಲಿ ಮಾತನಾಡಿ ಅವರು ಈ ನೆಲದ ಕಾನೂನು, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನೆಲ್ಲಾ ಗಾಳಿಗೆ ತೂರಿ, ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಕಾಂಗ್ರೆಸ್ ಸರ್ಕಾರದ ದ್ವೇಷ ರಾಜಕಾರಣ ಮಿತಿಮೀರಿದೆ ಎಂದು ವಾಗ್ದಾಳಿ ನಡೆಸಿದರು.
ಮುಡಾ ಹಗರಣ, ವಾಲ್ಮೀಕಿ ನಿಗಮದ ಭ್ರಷ್ಟಾಚಾರ, ವಕ್ಫ್ ಗೊಂದಲ, ಬಾಣಂತಿಯರ ಸರಣಿ ಸಾವಿನ ಮುಜುಗರದಿಂದ ಪಾರಾಗಲು,
ನಿರಂತರವಾಗಿ ಕಾಂಗ್ರೆಸ್ ಸರ್ಕಾರ ಬಿಜೆಪಿ ನಾಯಕರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ. ಇಂದು ಕಾಂಗ್ರೆಸ್ನ ಈ ದ್ವೇಷ ರಾಜಕಾರಣಕ್ಕೆ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಅವರು ಬಲಿಪಶುವಾಗಿದ್ದಾರೆ.
ವಿಧಾನಪರಿಷತ್ ಸದಸ್ಯರಾದ ಸಿ.ಟಿ ರವಿ ಅವರನ್ನು ಬಂಧಿಸಿರುವ ಕ್ರಮವೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ. ಸದನದಲ್ಲಿ ಸಭಾದ್ಯಕ್ಷರು ಶಿಸ್ತು ಕಾಪಾಡುವ ಹೊಣೆ ಹೊತ್ತಿರುತ್ತಾರೆ. ಅದರಂತೆ, ಮಾನ್ಯ ಸಭಾಪತಿಗಳು ಈ ವಿಚಾರವಾಗಿ ರೂಲಿಂಗ್ ನೀಡಿದ ನಂತರವೂ, ಕಾಂಗ್ರೆಸ್ ಸರ್ಕಾರ ಈ ನೆಲದ ಕಾನೂನುಗಳನ್ನು ಗಾಳಿಗೆ ತೂರಿ, ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು, ರವಿ ಅವರನ್ನು ಅಕ್ರಮವಾಗಿ ಬಂಧಿಸಿ, ವಿನಾಕಾರಣ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದೆ.
ಅಲ್ಲದೇ, ಬಂಧನದ ನಂತರ ಠಾಣೆಯಲ್ಲೂ ಇಟ್ಟುಕೊಳ್ಳದೇ, ನಮ್ಮ ಭೇಟಿಗೂ ಅವಕಾಶ ಕೊಡದೇ, ರಾತ್ರಿಯಿಡೀ ಅಜ್ಞಾತ ಸ್ಥಳಗಳಲ್ಲಿ ಸುತ್ತಾಡಿಸಿದ ಪೊಲೀಸರ ನಡೆ ಅನುಮಾನಸ್ಪಾದವಾಗಿದೆ.
ಪೊಲೀಸರ ಈ ನಡೆಯಿಂದ ಸ್ವತಃ ಭೀತಿಗೊಳಗಾಗಿರುವ ಶಾಸಕರು, ಸರ್ಕಾರ ತಮ್ಮನ್ನು ಕೊಲೆ ಮಾಡಲು ಸಂಚು ರೂಪಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ದ್ವೇಷದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.