ತೆಲುಗು ಚಿತ್ರರಂಗದ ಖ್ಯಾತ ನಟರಾದ ರಾಣಾ ದಗ್ಗುಬಾಟಿ ಹಾಗೂ ವೆಂಕಟೇಶ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ನಟರಾದಾ ರಾಣಾ ದಗ್ಗುಬಾಟಿ, ವೆಂಕಟೇಶ್, ಅಭಿರಾಮ್ ದಗ್ಗುಬಾಟಿ ಹಾಗೂ ಅವರ ಸಹೋದರ ನಿರ್ಮಾಪಕ ಸುರೇಶ್ ಬಾಬು ವಿರುದ್ಧ ಕಳ್ಳತನ, ಗೂಂಡಾ ವರ್ತನೆ ಮತ್ತು ಅಕ್ರಮವಾಗಿ ಕಟ್ಟಡ ನೆಲಸಮ ಮಾಡಿದ ಆರೋಪ ಕೇಳಿ ಬಂದಿದ್ದು ಈ ನಾಲ್ವರ ವಿರುದ್ಧ ಫಿಲಂ ನಗರ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಿಸಲಾಗಿದೆ.
ನಂದ ಕುಮಾರ್ ಎಂಬುವವರು ರಾಣಾ ದಗ್ಗುಬಾಟಿ, ವೆಂಕಟೇಶ್, ಅಭಿರಾಮ್ ದಗ್ಗುಬಾಟಿ ಹಾಗೂ ಅವರ ಸಹೋದರ ನಿರ್ಮಾಪಕ ಸುರೇಶ್ ಬಾಬು ವಿರುದ್ಧ ದೂರು ದಾಖಲಿಸಿದ್ದಾರೆ. ಅಕ್ರಮವಾಗಿ ಬೇರೊಂದು ಪ್ರಾಪರ್ಟಿಗೆ ನುಗ್ಗಿದ್ದಲ್ಲದೆ ಅದನ್ನು ನೆಲಸಮಗೊಳಿಸಿದ ಆರೋಪವನ್ನು ಅವರುಗಳ ಮೇಲೆ ಹೊರಿಸಲಾಗಿದೆ.
ಫಿಲಂ ನಗರ್ನಲ್ಲಿರುವ ಡೆಕ್ಕನ್ ಕಿಚ್ಚನ್ ಹೆಸರಿನ ಹೋಟೆಲ್ ಅನ್ನು ರಾಣಾ, ವೆಂಕಟೇಶ್, ಸುರೇಶ್ ಬಾಬು ಮತ್ತು ಅಭಿರಾಮ್ ಅವರುಗಳು ಅಕ್ರಮವಾಗಿ ನೆಲಸಮ ಮಾಡಿದ್ದಾರೆ ಎಂದು ಹೋಟೆಲ್ನ ಮಾಲೀಕ ನಂದ ಕುಮಾರ್ ಆರೋಪ ಮಾಡಿದ್ದಾರೆ. ಅಸಲಿಗೆ ಹೋಟೆಲ್ ನಿರ್ಮಿಸಲಾಗಿರುವ ಸ್ಥಳ ದಗ್ಗುಬಾಟಿ ಕುಟುಂಬಕ್ಕೆ ಸೇರಿದ್ದಾಗಿದ್ದು, ಆ ಸ್ಥಳವನ್ನು ನಂದ ಕುಮಾರ್ ಅವರಿಗೆ ಲೀಸ್ಗೆ ಕೆಲ ವರ್ಷಗಳ ಹಿಂದೆ ನೀಡಲಾಗಿತ್ತು. ಅಲ್ಲಿ ನಂದ ಕುಮಾರ್ ಡೆಕ್ಕನ್ ಕಿಚನ್ ಹೆಸರಿನ ಹೋಟೆಲ್ ನಿರ್ಮಾಣ ಮಾಡಿದ್ದರು. ಆದರೆ ಲೀಸ್ ವಿಚಾರದಲ್ಲಿ ನಂದ ಕುಮಾರ್ ಹಾಗೂ ದಗ್ಗುಬಾಟಿ ಕುಟುಂಬದ ನಡುವೆ ವಿವಾದ ಭುಗಿಲೆದ್ದಿದ್ದು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
2022 ರಲ್ಲಿ ಸ್ಥಳದ ವಿಚಾರವಾಗಿ ನಂದ ಕುಮಾರ್ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಆಗ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ನವರು ಹೋಟೆಲ್ನ ಒಂದು ಭಾಗವನ್ನು ಒಡೆದಿದ್ದರು. ಅದಾದ ಬಳಿಕ ದಗ್ಗುಬಾಟಿ ಕುಟುಂಬ ಹಾಗೂ ನಂದ ಕುಮಾರ್ ನಡುವೆ ವಿವಾದಗಳು ಇನ್ನಷ್ಟು ಹೆಚ್ಚಾಗಿದ್ದು, ಇತ್ತೀಚೆಗಷ್ಟೆ ಹೋಟೆಲ್ ಅನ್ನು ದಗ್ಗುಬಾಟಿ ಕುಟುಂಬದ ಆದೇಶದಂತೆ ಸಂಪೂರ್ಣವಾಗಿ ನೆಲಸಮಗೊಳಿಸಲಾಗಿದೆ. ದಗ್ಗುಬಾಟಿ ಕುಟುಂಬದ ಸದಸ್ಯರು ಅಕ್ರಮವಾಗಿ ತನ್ನ ಕಟ್ಟಡವನ್ನು ನೆಲಸಮ ಮಾಡಿದ್ದಾರೆ ಎಂದು ನಂದ ಕುಮಾರ್ ಆರೋಪ ಮಾಡಿದ್ದಾರೆ ಅಲ್ಲದೆ, ಆರೋಪಿಗಳು ಸಿಟಿ ಸಿವಿಲ್ ಕೋರ್ಟ್ನ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.