ಬೆಂಗಳೂರು:- ಐಟಿ ಸಿಟಿ ಬೆಂಗಳೂರು ಈಗ ಕ್ರೈಂ ಸಿಟಿ ಆಗಿದ್ದು, ಒಂದೇ ವರ್ಷದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾರೀ ಹೆಚ್ಚಳವಾಗಿದೆ.
2023ನೇ ಸಾಲಿನ ವಾರ್ಷಿಕ ಅಪರಾಧ ವರದಿಯನ್ನು ಪೊಲೀಸರು ಬಿಡುಗಡೆಗೊಳಿಸಿದ್ದು, ಇದರಲ್ಲಿ ಕೊಲೆಗಳು ಶೇ.31, ದರೋಡೆ ಶೇ.41 ಹಾಗೂ ಸೈಬರ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದೆ.
ಅಲ್ಲದೆ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕೃತ್ಯಗಳಿಗೆ ಕಡಿವಾಣ ಬೀಳದೆ ಏರಿಕೆಯಾಗಿದ್ದು ವರದಿಯಾಗಿದೆ. 2021ರಲ್ಲಿ 7566 ಹಾಗೂ 2022ರಲ್ಲಿ 9254 ಪ್ರಕರಣಗಳು ವರದಿಯಾದರೆ 2023ರಲ್ಲಿ 12627 ಪ್ರಕರಣಗಳು ದಾಖಲಾಗಿವೆ. ಆದರೆ ಅಪರಾಧ ಪತ್ತೆದಾರಿಕೆ ಕುಂಠಿತವಾಗಿದೆ. ಕಳೆದ ವರ್ಷ 12 ಸಾವಿರ ಪೈಕಿ ಕೇವಲ 3603 ಪ್ರಕರಣಗಳು ಪತ್ತೆಯಾಗಿವೆ.
3 ವರ್ಷಗಳಲ್ಲಿ 533 ಹತ್ಯೆಗಳು ನಡೆದಿವೆ. ಅವುಗಳಲ್ಲಿ ತಕ್ಷಣ ಪ್ರಚೋದನೆಗೊಳಗಾಗಿ (49), ಅನೈತಿಕ ಸಂಬಂಧ (32), ಕೌಟುಂಬಿಕ ಕಲಹ (31), ವೈರತ್ವ (31) ಹಾಗೂ ಹಣಕಾಸು ವಿವಾದ (17)ಗಳಿಗೆ ಅಧಿಕ ಹತ್ಯೆಗಳಾಗಿವೆ. ಆದರೆ ಲಾಭಕ್ಕಾಗಿ ಹಾಗೂ ಭೂ ವಿವಾದಗಳಿಗೆ ಹತ್ಯೆಗಳಲ್ಲಿ ಇಳಿಕೆ ಕಂಡು ಬಂದಿದೆ. 2021ರಲ್ಲಿ 153, 2022ರಲ್ಲಿ 173 ಹಾಗೂ 2023ರಲ್ಲಿ 207 ಸೇರಿ 3 ವರ್ಷಗಳಲ್ಲಿ 533 ಹತ್ಯೆಗಳು ನಡೆದಿವೆ.
ಮೊಬೈಲ್ ಕಳ್ಳತನವನ್ನು ದರೋಡೆ ಎಂದು ಪರಿಗಣಿಸಿದ್ದು ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿ 2023ರಲ್ಲಿ ದಾಖಲಾದ 673 ದರೋಡೆ ಪ್ರಕರಣಗಳಲ್ಲಿ 385 (ಶೇ.57) ಮೊಬೈಲ್ ದೋಚಿದ ಪ್ರಕರಣಗಳಾಗಿವೆ.
ರಾಜಧಾನಿಯಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕೃತ್ಯಗಳು ಏರು ಮುಖವಾಗಿದೆ. ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಇದರಿಂದ ಸಂತ್ರಸ್ತೆಯರು ದೂರು ನೀಡಲು ಮುಂದಾಗುತ್ತಿರುವುದು ಅಪರಾಧ ಪ್ರಕರಣಗಳ ದಾಖಲು ಹೆಚ್ಚಾಗಲು ಕಾರಣವಾಗಿದೆ
ನಗರದಲ್ಲಿ ಸೈಬರ್ ಪಾತಕಿಗಳ ಹಾವಳಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. 2022ರಲ್ಲಿ 9940 ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ 17623 ಪ್ರಕರಣಗಳು ವರದಿಯಾಗಿವೆ.