ಬೆಂಗಳೂರು: ತಮ್ಮ ಮೇಲೆ ಯುವತಿ ಗಂಭೀರ ಆರೋಪ ಮಾಡಿ ದೂರು ನೀಡುತ್ತಿದ್ದಂತೆಯೇ ಇತ್ತ ಕ್ರಿಕೆಟಿಗ (Cricketer) ಕೆ.ಸಿ ಕಾರಿಯಪ್ಪ (KC Cariappa) ಕೂಡ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನನಗೆ ಯುವತಿ ಬೆದರಿಕೆ ಹಾಗೂ ಟಾರ್ಚರ್ ಕೊಡುತ್ತಿದ್ದಾರೆ. ನನ್ನ ಕ್ರಿಕೆಟ್ ಕರಿಯರ್ಗೆ ತೊಂದರೆ ಕೊಡ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಾರಿಯಪ್ಪ ಹೇಳಿದ್ದೇನು..?: ಈ ಸಂಬಂಧ ವೀಡಿಯೋ ಬಿಡುಗಡೆ ಮಾಡಿರುವ ಕಾರಿಯಪ್ಪ, ಯುವತಿ ನನ್ನ ಮೇಲೆ ಅನಗತ್ಯ ಆರೋಪ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯೇ ಈ ಬಗ್ಗೆ ನಾನು ದೂರು ದಾಖಲಿಸಿದ್ದು, ನನಗೆ ಬೆದರಿಕೆ ಹಾಗೂ ಟಾರ್ಚರ್ ಕೊಡ್ತಿದ್ದಾರೆ. ನನ್ನ ಕ್ರಿಕೆಟ್ ಕರಿಯರ್ಗೆ ತೊಂದರೆ ಕೊಡ್ತಿದ್ದಾರೆ. ಅಲ್ಲದೇ ನಾನು ಮನೆಯಲ್ಲಿ ಇಲ್ಲದ ವೇಳೆ ಬಂದು ಗಲಾಟೆ ಮಾಡಿದ್ದಾರೆ ಎಂದು ಈಗಾಗಲೇ ದೂರು ದಾಖಲಿಸಿದ್ದೇನೆ. ಇದಕ್ಕೆ ಪ್ರತಿಯಾಗಿ ಆಕೆ ಎಫ್ಐಆರ್ (FIR) ದಾಖಲಿಸಿದ್ದಾಳೆ ಎಂದು ಅವರು ಹೇಳಿಕೊಂಡಿದ್ದಾರೆ.
ಮದುವೆ ಆಗದೇ ಇದ್ದರೆ ಸಾಯುತ್ತೇನೆ, ಚಾಕು ಹಾಕಿಕೊಳ್ಳುತ್ತೇನೆ ಎಂದು ಯುವತಿ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಕಷ್ಟ ಆಗಿದೆ, ನನ್ನ ಭದ್ರತೆಗಾಗಿ ದೂರು ನೀಡಿದ್ದೇನೆ. ಇದಕ್ಕೆ ಕೌಂಟರ್ ಆಗಿ ನನ್ನ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ ಎಂದಿದ್ದಾರೆ.
ಒಂದೂವರೆ ವರ್ಷದಿಂದ ನಮ್ಮ ರಿಲೇಷನ್ಶಿಪ್ ಶುರುವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅವರೇ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ನಂತರ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು. ಇವರಿಗೆ ಮದುವೆಯಾಗಿ ಡಿವೋರ್ಸ್ ಆಗಿರುವ ವಿಚಾರ ಗೊತ್ತಿರಲಿಲ್ಲ. ಮುಸ್ಲಿಂ ಒಬ್ಬರನ್ನು ಮದುವೆ ಆಗಿ ಅವರಿಗೆ ಡಿವೋರ್ಸ್ ಆಗಿದೆ. ಇದಲ್ಲದೆ ಅಮೃತಹಳ್ಳಿ ಠಾಣೆಯಲ್ಲಿ ಅವರ ಊರಿನ ಹುಡುಗನ ಮೇಲೆಯೇ ಚಿತ್ರಹಿಂಸೆ ನೀಡಿದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.