ವಿಶಾಖಪಟ್ಟಣಂ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಬಳಿಕ ಭಾರತದಲ್ಲಿ ಕ್ರಿಕೆಟ್ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಜಿಯೋಸಿನಿಮಾದಲ್ಲಿ (Jiocinema) ಅತ್ಯಧಿಕ ವೀಕ್ಷಕರ (Viewership) ಸಂಖ್ಯೆ ತಲುಪಿ ದಾಖಲೆ ಬರೆದಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಗುರುವಾರ ನಡೆದ ಭಾರತ-ಆಸ್ಟ್ರೇಲಿಯಾ (Ind vs Aus) ನಡುವಿನ ಮೊದಲ ಟಿ20 ಪಂದ್ಯವನ್ನು ಏಕಕಾಲಕ್ಕೆ 8.6 ಕೋಟಿಗಿಂತಲೂ ಅಧಿಕ ಕ್ರಿಕೆಟ್ ಅಭಿಮಾನಿಗಳು ವೀಕ್ಷಣೆ ಮಾಡಿದ್ದು, ಕ್ರಿಕೆಟ್ ಇತಿಹಾಸದಲ್ಲೇ ಹೊಸ ಇತಿಹಾಸ ಸೃಷ್ಟಿಸಿದೆ. ಇತ್ತೀಚೆಗೆ ಭಾರತ ಮತ್ತು ಆಸೀಸ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯವನ್ನು 5.9 ಕೋಟಿ ಮಂದಿ ವೀಕ್ಷಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಆದ್ರೆ ಜಿಯೋಸಿನಿಮಾ ಏಕಕಾಲಕ್ಕೆ 8.6 ಕೋಟಿಗೂ ಅಧಿಕ ವೀಕ್ಷಕರನ್ನ ಕಂಡಿದ್ದು, ಹೊಸ ದಾಖಲೆ ನಿರ್ಮಿಸಿದೆ.
ಭಾರತ ಮತ್ತು ಆಸೀಸ್ (Ind vs Aus) ಟಿ20 ಆರಂಭದಿಂದಲೇ ಪ್ರೇಕ್ಷಕರು ಓಟಿಟಿ ವೇದಿಕೆಗೆ ಲಗ್ಗೆಯಿಡಲು ಶುರು ಮಾಡಿದರು. ಆಸೀಸ್ ಬ್ಯಾಟಿಂಗ್ ಮುಗಿದು, ಟೀಂ ಇಂಡಿಯಾ ತನ್ನ ಇನ್ನಿಂಗ್ಸ್ ಆರಂಭಿಸುತ್ತಿದ್ದಂತೆ ವೀಕ್ಷಕರ ಸಂಖ್ಯೆ 8 ಕೋಟಿ ಮೀರಿತ್ತು. ಭಾರತ ತನ್ನ ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ 1 ವಿಕೆಟ್ ಕಳೆದುಕೊಂಡು 11 ರನ್ ಗಳಿಸಿತ್ತು. ಇಶಾನ್ ಕಿಶನ್ ಕ್ರೀಸ್ನಲ್ಲಿದ್ದರು, ಈ ಸಂದರ್ಭದಲ್ಲಿ ವೀಕ್ಷಕರ ಸಂಖ್ಯೆ 8.6 ಕೋಟಿ ತಲುಪಿತ್ತು, ಅಲ್ಲದೇ ಜಿಯೋಸಿನಿಮಾ ಆ್ಯಪ್ ಕೂಡ ಕ್ರ್ಯಾಶ್ ಆಗಿತ್ತು.