ಮಂಡ್ಯ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧವಿದ್ದರೂ ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆಗಳು ತಲೆ ಎತ್ತಿವೆ. ತೂಬಿನಕೆರೆ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಅಕ್ರಮ ಶೆಡ್ ನಿರ್ಮಾಣ ಮಾಡಿ ಜಾನುವಾರುಗಳನ್ನು ಕೊಂದು ಅವುಗಳ ಮೂಳೆ, ಮಾಂಸ ಸಂಗ್ರಹ ಮಾಡಲಾಗುತ್ತಿದೆ. ಗುಜರಿ ವಸ್ತುಗಳ ಸಂಗ್ರಹದ ಹೆಸರಲ್ಲಿ ಗೋವುಗಳ ಮಾರಣಹೋಮ ನಡೆಸಲಾಗುತ್ತಿದೆ.
ಕೊಳೆತ ವಾಸನೆ ಹೆಚ್ಚಾಗ್ತಿದ್ದಂತೆ ಸ್ಥಳೀಯರಿಗೆ ಅನುಮಾನ ಉಂಟಾಗಿದ್ದು, ಭಜರಂಗದಳದ ಕಾರ್ಯಕರ್ತರು ಅಖಾಡಕ್ಕಿಳಿದು ಅಕ್ರಮ ಶೆಡ್ ಪತ್ತೆಹಚ್ಚಿದ್ದಾರೆ. ತೂಬಿನಕೆರೆ ಗ್ರಾಮದ ಲಿಂಗರಾಜು ಎಂಬುವರ ಜಮೀನನ್ನು ಮಂಡ್ಯದ ಮೂಲದ ವ್ಯಕ್ತಿ ಬಾಡಿಗೆ ಪಡೆದು ಶೆಡ್ ನಿರ್ಮಿಸಿ ಗೋವುಗಳ ಮೂಳೆ ಸಂಗ್ರಹ ಮಾಡುತ್ತಿದ್ದನು. ಈ ಮೂಳೆಗಳಿಂದ ಪೌಡರ್ ತಯಾರಿಸುತ್ತಿದ್ದ ಎನ್ನುವ ಆರೋಪ ಕೇಳಿಬಂದಿದ್ದು, ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.