ವಿಮಾನದೊಳಗೆ ದಂಪತಿ ಲೈಂಗಿಕ ಕ್ರಿಯೆ ನಡೆಸಿದ್ದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ವಿಸ್ ಇಂಟರ್ನ್ಯಾಷನಲ್ ಏರ್ಲೈಸ್ ನಲ್ಲಿ ಘಟನೆ ನಡೆದಿದ್ದು ಇದೀಗ ವಿಮಾನದ ಸಿಬ್ಬಂದಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ವಿಮಾನಯಾನ ಸಂಸ್ಥೆ ಈಗ ಗೌಪ್ಯತೆ ಉಲ್ಲಂಘನೆಯಾಗಿದ್ದಕ್ಕೆ ತನಿಖೆಯನ್ನು ಶುರು ಮಾಡಿದೆ. 2024ರ ನವೆಂಬರ್ನಲ್ಲಿ ಬ್ಯಾಂಕಾಕ್-ಜ್ಯೂರಿಚ್ ವಿಮಾನ ಎಲ್ಎಕ್ಸ್ 181ರಲ್ಲಿ ದಂಪತಿ ವಿಮಾನದಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದರು.
ವಿಮಾನದ ಫಸ್ಟ್ ಕ್ಲಾಸ್ ಬಳಿಯ ಕಿಚನ್ ಪ್ರದೇಶದಲ್ಲಿ ದಂಪತಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು ಎಂದು ವರದಿಯಾಗಿತ್ತು. ಕಾಕ್ಪಿಟ್ ಬಳಿಯ ಕ್ಯಾಮೆರಾದಲ್ಲಿ ದಂಪತಿಯ ಲೈಂಗಿಕ ಕ್ರಿಯೆಯ ದೃಶ್ಯ ಸೆರೆಯಾಗಿದೆ.
ಈ ಕ್ಯಾಮೆರಾ ಲೈವ್ ಫೋಟೊಗಳನ್ನು ಮಾತ್ರ ತೆಗೆಯುತ್ತದೆ. ಅದರಲ್ಲಿ ವಿಡಿಯೊ ರೆಕಾರ್ಡ್ ಮಾಡಲು ಸಾಧ್ಯವಿಲ್ಲ. ಆದರೆ ಕಾಕ್ಪಿಟ್ನಲ್ಲಿದ್ದ ಯಾರೊಬ್ಬರೂ ಅಂದರೆ ಪೈಲಟ್ ಅಥವಾ ಇತರ ಸಿಬ್ಬಂದಿ ಯಾರೋ ತಮ್ಮ ಮೊಬೈಲ್ನಲ್ಲಿ ಈ ಘಟನೆಯ ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ ಎನ್ನಲಾಗುತ್ತಿದ್ದು ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಈ ಘಟನೆಯ ಬಗ್ಗೆ ವಿಮಾನಯಾನ ಸಂಸ್ಥೆ ಪ್ರತಿಕ್ರಿಯಿಸಿದೆ. ʼʼದಂಪತಿಯ ಒಪ್ಪಿಗೆ ಇಲ್ಲದೆ ವಿಡಿಯೊ ರೆಕಾರ್ಡ್ ಮಾಡುವುದು, ಅದನ್ನು ವರ್ಗಾವಣೆ ಮಾಡುವುದು ನಮ್ಮ ಮಾರ್ಗಸೂಚಿಗಳು ಮತ್ತು ಮೌಲ್ಯಗಳಿಗೆ ವಿರುದ್ಧವಾಗಿದೆ ಮತ್ತು ಇದು ಸಂರಕ್ಷಣಾ ನಿಯಮಗಳನ್ನು ಉಲ್ಲಂಘಿಸುತ್ತದೆ” ಎಂದು ವಿಮಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ʼʼರೆಕಾರ್ಡ್ ಮಾಡುವ ಬದಲು, ಸಿಬ್ಬಂದಿ ನೇರವಾಗಿ ಮಧ್ಯ ಪ್ರವೇಶಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.
ʼʼನಮ್ಮಲ್ಲಿರುವ ಸಿಬ್ಬಂದಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ. ನಮ್ಮ ಸಿಬ್ಬಂದಿಯು ಇಂತಹ ಕೆಲಸಕ್ಕೆ ಕೈಹಾಕಿವುದಿಲ್ಲ ಎಂದು ನಾವು ನಂಬುತ್ತೇವೆ. ಆದರೂ ಈ ರೆಕಾರ್ಡಿಂಗ್ ವಿಡಿಯೊಗಳು ಹೇಗೆ ಲೀಕ್ ಆದವು ಎಂಬುದನ್ನು ನಾವು ನಿಖರವಾಗಿ ತಿಳಿಯಲು ಬಯಸುತ್ತೇವೆʼʼ ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ ವಿಡಿಯೊವನ್ನು ರೆಕಾರ್ಡ್ ಮಾಡಿ ಲೀಕ್ ಮಾಡಿದ ಸಿಬ್ಬಂದಿ ಯಾರು ಎಂಬುದು ತಿಳಿದುಬಂದರೆ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ವಿಮಾನಯಾನ ಸಂಸ್ಥೆ ಸಾರ್ವಜನಿಕರಿಗೆ ಭರವಸೆ ನೀಡಿದೆ.