ಮುಂಬೈ: ದೇಶದ ಅತಿ ಉದ್ದದ ಸಮುದ್ರ ಸೇತುವೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್(MTHL) ಅನ್ನು ಜನವರಿ 12 ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Maharashtra Chief Minister Eknath Shinde) ಹೇಳಿದ್ದಾರೆ.
ಮುಂಬೈನ ಸೆವ್ರಿ ಮತ್ತು ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶದ ನಡುವಿನ 21.8 ಕಿಲೋಮೀಟರ್ ಉದ್ದದ ಸೇತುವೆಯು ಪ್ರಸ್ತುತ ಎರಡು ಗಂಟೆಗಳಿಂದ ಸುಮಾರು 15-20 ನಿಮಿಷಗಳಿಗೆ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುತ್ತದೆ ಎಂದು ಸಿಎಂ ಹೇಳಿದರು.
ಪರಿಸರ ಸ್ನೇಹಿ ಕಾಮೆಟ್ EV ಎಲೆಕ್ಟ್ರಿಕ್ ವೆಹಿಕಲ್ ಬಗ್ಗೆ ನಿಮಗೆಷ್ಟು ಗೊತ್ತು?
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 12 ರಂದು (ಶುಕ್ರವಾರ) MTHL ಅನ್ನು ಉದ್ಘಾಟಿಸಲಿದ್ದಾರೆ. ಈ ಸೇತುವೆಯಿಂದ ಆರ್ಥಿಕ ಅಭಿವೃದ್ಧಿಯಾಗಲಿದೆ ಎಂದು ಶಿಂಧೆ ಮಾಧ್ಯಮಗಳಿಗೆ ತಿಳಿಸಿದರು.
ರಾಜ್ಯದ ಎರಡು ದೊಡ್ಡ ನಗರಗಳನ್ನು ಸಂಪರ್ಕಿಸುವ ಮುಂಬೈ ಪುಣೆ ಎಕ್ಸ್ಪ್ರೆಸ್ವೇಗೆ MTHL ಮತ್ತಷ್ಟು ಸಂಪರ್ಕ ಕಲ್ಪಿಸುತ್ತದೆ. MTHL 6 ಲೇನ್ ಮಾರ್ಗ ಹೊಂದಿದೆ. ಸಮುದ್ರದ ಮೇಲೆ 16.50 ಕಿಲೋಮೀಟರ್ ಮತ್ತು ಭೂಮಿಯಲ್ಲಿ 5.50 ಕಿಲೋಮೀಟರ್ ಉದ್ದವನ್ನು ಹೊಂದಿದೆ. ಈ ಸೇತುವೆಗೆ ʼಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತುʼ ಎಂದು ಹೆಸರನ್ನು ಇಡಲಾಗುತ್ತದೆ.
ಸೇತುವೆಯ ವಿಶೇಷತೆ ಏನು?
ಈ ಯೋಜನೆಯು ಸರಿಸುಮಾರು 22 ಕಿ.ಮೀ. ಉದ್ದದ 6 ಲೇನ್ (3+3-ಲೇನ್, 2 ತುರ್ತು ಲೇನ್) ಸೇತುವೆ ಯನ್ನು ಮುಂಬೈ ನಗರದ ಶಿವಡಿ ಮತ್ತು ಮುಖ್ಯ ಭೂಭಾಗದ ನ್ಹಾವಾವನ್ನು ಸಂಪರ್ಕಿಸುತ್ತದೆ. 1962 ರಲ್ಲೇ ಎರಡು ನಗರಗಳ ಮಧ್ಯೆ ಸಂಚಾರ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ಜಾರಿ ಸಂಬಂಧ ಹಲವು ಅಧ್ಯಯನಗಳು ನಡೆದಿದ್ದವು. 2008ರಲ್ಲಿ ಮಹಾರಾಷ್ಟ್ರ ಸರ್ಕಾರ ಈ ಯೋಜನೆ ಜಾರಿಗೆ ಸಂಬಂಧ ಟೆಂಡರ್ ಆಹ್ವಾನಿಸಿತ್ತು.
ಈ ಯೋಜನೆಯಲ್ಲಿ ರಾಜಕೀಯದ ಗಾಳಿ ಬೀಸಿದ ಹಿನ್ನೆಲೆಯಲ್ಲಿ ಭಾರೀ ಟೀಕೆ ಬಂದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಕೊನೆಗೆ ಎಲ್ಲಾ ಇಲಾಖೆಗಳ ಅನುಮತಿ ಪಡೆದ ಬಳಿಕ 2016ರ ಡಿಸೆಂಬರ್ 24 ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಭೂಮಿ ಸ್ವಾಧೀನ ಪಡಿಸಿದ ಬಳಿಕ 2018ರ ಏಪ್ರಿಲ್ 24 ರಂದು ಕಾಮಗಾರಿ ಆರಂಭವಾಗಿತ್ತು.
ನಿಗದಿ ಪ್ರಕಾರ ಸೆಪ್ಟೆಂಬರ್ 22, 2022ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಕೋವಿಡ್ ಲಾಕ್ಡೌನ್ ನಂತರ ಕಾರ್ಮಿಕರ ಸಮಸ್ಯೆಯಿಂದಾಗಿ ಯೋಜನೆ ಮುಂದಕ್ಕೆ ಹೋಗಿ ಈಗ ಜನವರಿಯಲ್ಲಿ ಉದ್ಘಾಟನೆಯಾಗುತ್ತಿದೆ. ಆರಂಭದಲ್ಲಿ ಈ ಯೋಜನೆ ನಿರ್ಮಾಣಕ್ಕೆ 14,712.70 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಈ ವೆಚ್ಚ 16,904.43 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಆರ್ಟಿಐ ಅಡಿ ಉತ್ತರ ಸಿಕ್ಕಿತ್ತು.