ಬೆಂಗಳೂರು/ಚಿಕ್ಕಮಗಳೂರು:- ಆರು ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಕ್ಸಲರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಪ್ರಕ್ರಿಯೆ ನಡೆಯಲಿದೆ.
ಸಮಾಜದ ಮುಖ್ಯವಾಹಿನಿಯಿಂದ ಮರೆಯಾಗಿ ವನವಾಸದಲ್ಲಿರುವ ನಕ್ಸಲರ ಬದುಕಿಗೂ ಅಂತೂ ಇಂತೂ ಶ್ರಾವಣ ಬಂದಿದೆ. ಅಡವಿಯಲ್ಲಿ ಅಡಗಿ ಕುಳಿತು ಸದಾ ಸಂಘರ್ಷ, ರಕ್ತಚರಿತ್ರೆ ಬರೆಯುತ್ತಿದ್ದ ನಕ್ಸಲರು ಶಾಂತಿ ಮಂತ್ರ ಪಠಿಸಿದ್ದಾರೆ. 4 ದಶಕಗಳ ಕಾಲ ಸದ್ದು ಮಾಡಿದ್ದ ನಕ್ಸಲ್ ಸಂಸ್ಕೃತಿಯಿಂದ ಕರ್ನಾಟಕ ಮುಕ್ತ ಆಗುವ ಮುನ್ಸೂಚನೆ ಸಿಕ್ಕಿದೆ.
ನಕ್ಸಲ್ ನಾಯಕ ವಿಕ್ರಂ ಗೌಡನ ಎನ್ಕೌಂಟರ್ನಿಂದ ಕಾಡಲ್ಲಿನ ಕೆಂಪು ಉಗ್ರರ ಸದ್ದಡಗಿದೆ.
ಬಹುತೇಕ ಕಾಫಿನಾಡಿನ ಕಾಡಲ್ಲಿ ನಕ್ಸಲರ ಯುಗಾಂತ್ಯವಾಗಿದೆ. ಮಾಜಿ ನಕ್ಸಲ್ ನೂರ್ ಜುಲ್ಫಿಕರ್ ಶ್ರೀಧರ್ ನೇತೃತ್ವದಲ್ಲಿ ಶರಣಾಗತಿಯಾಗಲಿದ್ದಾರೆ. ಶಾಂತಿಗಾಗಿ ನಾಗರೀಕ ವೇದಿಕೆಯ ಅಡಿಯಲ್ಲಿ ನಕ್ಸಲರು ಇಂದು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ವಿಕ್ರಮ ಅಮಟೆ ಮುಂದೆ ಶರಣಾಗಲಿದ್ದಾರೆ. ಇನ್ನು ಇವರು ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.
ಸರ್ಕಾರಕ್ಕೆ ನಕ್ಸಲರ ಬೇಡಿಕೆಗಳು:-
* ಸಮಾಜದ ಮುಖ್ಯವಾಹಿನಿಗೆ ಬಂದ ನಕ್ಸಲರ ಆತ್ಮಗೌರವಕ್ಕೆ ಧಕ್ಕೆಯಾಗಬಾರದು
* ಪ್ರಜಾತಾಂತ್ರಿಕ ಹೋರಾಟಕ್ಕೆ ಯಾವುದೇ ತೊಡಕಾರಬಾರದು
* ಸಂಬಂಧ ಇಲ್ಲದಿದ್ದರೂ ಹೆಸರು ಇರೋ ಪ್ರಕರಣದಿಂದ ಕೈಬಿಡಬೇಕು
* ಬೇಗ ಜಾಮೀನಿನ ಬರಲು ಸಹಕರಿಸಬೇಕು
* ವಿಶೇಷ ನ್ಯಾಯಾಲಯದಲ್ಲಿ ಮೊಕದ್ದಮೆ ಇತ್ಯರ್ಥಕ್ಕೆ ಸಹಕರಿಸಬೇಕು
* ಕೌಶಲ ತರಬೇತಿಗೆ ಸಹಕಾರ ನೀಡಬೇಕು, ಕೊಟ್ಟ ಮಾತು ಉಳಿಸಿಕೊಳ್ಳಬೇಕು
* ಸರ್ಕಾರಗಳು ನಕ್ಸಲರ ಬಗ್ಗೆ ಅನುಕಂಪದಿಂದ ವರ್ತಿಸಬೇಕು
* ಈ ಹಿಂದೆ ಸಮಾಜದ ಮುಖ್ಯವಾಹಿನಿಗೆ ಬಂದಿರುವ ಎಲ್ಲಾ ನಕ್ಸಲರಿಗೂ ಮಾತು ಕೊಟ್ಟ ಸರ್ಕಾರ ಎಲ್ಲಾ ಸೌಲಭ್ಯಗಳನ್ನ ನೀಡಬೇಕು
* ಸಮಾಜದ ಮುಖ್ಯವಾಹಿನಿಗೆ ಬಂದ ನಂತರ ಗೌರವದಿಂದ ನೋಡಬೇಕು
* ಪ್ರಜಾತಾಂತ್ರಿಕ ವ್ಯವಸ್ಥೆಯ ಹೋರಾಟದಲ್ಲಿರುವಾಗ ಅನುಮಾನದಿಂದ ನೋಡುವಂತಾಗಬಾರದು