ಕಾರವಾರ:- ಭ್ರಷ್ಟಾಚಾರ ಕೇಸ್ ಗೆ ಸಂಬಧಪಟ್ಟಂತೆ ಶಿರಸಿ ಬಿಜೆಪಿ ನಾಯಕಿಗೆ 1 ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ ವಿಧಿಸಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಕುಮಾರ್ ಈ ತೀರ್ಪು ನೀಡಿದ್ದಾರೆ. ಉಷಾ ಹೆಗಡೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುವ ಮೊದಲು ಶ್ರೀನಗರ ಪಂಚಾಯತ್ ವತಿಯಿಂದ ನಡೆದ ಸಭೆ ಸಮಾರಂಭಗಳಿಗೆ ಅಂಗನವಾಡಿ ಕಾರ್ಯಕರ್ತೆಯಾಗಿ ಹಾಜರಾಗಿದ್ದರು.
ಜಿ.ಪಂ.ಸದಸ್ಯತ್ವದ ಅಧಿಕಾರದಲ್ಲಿದ್ದಾಗ ಜ.2011 ರಿಂದ ನ.2012 ರವರೆಗೆ ಅಂಗನವಾಡಿ ಕಾರ್ಯಕರ್ತೆಯೆಂದು ಸರ್ಕಾರದಿಂದ ಗೌರವಧನ 88,630 ರೂ. ಪಡೆದುಕೊಂಡಿದ್ದಾರೆ. ಒಟ್ಟು ಎರಡು ಹುದ್ದೆಗಳನ್ನು ಹೊಂದಿದ್ದು, ಜನಪ್ರತಿನಿಧಿಯಾದ ನಂತರವೂ ಅಂಗನವಾಡಿ ಕಾರ್ಯಕರ್ತೆಯೆಂದು ಗೌರವಧನ ಪಡೆದು, ಸರ್ಕಾರಕ್ಕೆ ಮೋಸ ಮಾಡಿದ್ದಾಗಿ ಆರೋಪಿಸಲಾಗಿತ್ತು.
ಉಷಾ ರವೀಂದ್ರ ಹೆಗಡೆ ಏಕಕಾಲದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು. ಜಿಲ್ಲಾ ಪಂಚಾಯತ್ ಬದನಗೋಡ ಕ್ಷೇತ್ರದ ಸದಸ್ಯತ್ವ ಹುದ್ದೆಯನ್ನು ಸರಿಯಾಗಿ ನಿಭಾಯಿಸದೇ ಹಾಗೂ ಅಂಗನವಾಡಿ ಕರ್ತವ್ಯದಲ್ಲಿಯೂ ಸರಿಯಾಗಿ ಹಾಜರಿರದೇ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಾಜರಾತಿ ಪುಸ್ತಕದಲ್ಲಿ ಹಾಜರಿರುವುದಾಗಿ ಸುಳ್ಳು ಸಹಿ ಮಾಡಿದ್ದಾರೆ ಮತ್ತು ಈ ಮೂಲಕ ಭಾರತೀಯ ದಂಡ ಸಹಿತ ಕಲಂ 468ರ ಮೇರೆಗೆ ದಂಡನೀಯವಾದ ಅಪರಾಧವನ್ನು ಎಸಗಿದ್ದಾಗಿ ಆರೋಪಿಸಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಇಬ್ರಾಹಿಂ ನಬಿಸಾಬ್ ದೂರು ನೀಡಿದ್ದು, ಲೋಕಾಯುಕ್ತ ಪರ ಕಾರವಾರದ ಎಲ್.ಎಂ.ಪ್ರಭು ವಾದಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಎರಡು ಹುದ್ದೆ ಮಾಡಲು ಬರುವುದಿಲ್ಲ. ಸರ್ಕಾರದ ಆದೇಶದಂತೆ ಒಂದು ಹುದ್ದೆಗೆ ರಾಜೀನಾಮೆ ನೀಡಿ ಎಂದು ಮೌಖಿಕವಾಗಿ ಹಾಗೂ ಲಿಖಿತವಾಗಿ ಸೂಚಿಸಲಾಗಿತ್ತು. ಆದರೂ ಉಷಾ ಹೆಗಡೆ ಇಲಾಖೆಯ ಆದೇಶ ಹಾಗೂ ಧಾರವಾಡ ಹೈಕೋರ್ಟ್ ಸಂಚಾರಿ ಪೀಠ ನೀಡಿದ ಆದೇಶವನ್ನು ಧಿಕ್ಕರಿಸಿದ್ದರು. ಈ ಅಂಶಗಳನ್ನು ಜಿಲ್ಲಾ ಪ್ರಧಾನ ಸೆಷನ್ಸ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಸೋಮವಾರ ತೀರ್ಪು ಪ್ರಕಟಿಸಿದ್ದಾರೆ