ಬೆಂಗಳೂರು: ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ನಿಗಮ ಮಂಡಳಿಗಳ ನೇಮಕಾತಿಗೆ ಕೊನೆಗೂ ಕಾಯಕಲ್ಪ ದೊರೆಯುವ ನಿರೀಕ್ಷೆಯಿದ್ದು, 36 ಮಂದಿ ಶಾಸಕರಿಗೆ, 24 ಕಾರ್ಯಕರ್ತರೂ ಸೇರಿದಂತೆ ಒಟ್ಟು 70 ಕ್ಕೂ ಹೆಚ್ಚು ಜನರಿಗೆ ಅಧ್ಯಕ್ಷ ಸ್ಥಾನ ಘೋಷಣೆಯಾಗುವ ಸಾಧ್ಯತೆಗಳಿವೆ.
ಸುಮಾರು ಕಳೆದೆರಡು ತಿಂಗಳಿನಿಂದಲೂ ನಿಗಮ ಮಂಡಳಿಯ ನೇಮಕಾತಿ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಲೇ ಇವೆ. ಸರ್ಕಾರ ಕಾಂಗ್ರೆಸ್ ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಇನ್ನೂ ವಿಳಂಬ ಮಾಡುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡುವ ನಿಟ್ಟಿನಲ್ಲಿ ಅಂತಿಮ ತೀರ್ಮಾನಗಳಾಗಿವೆ. ಕಾಂಗ್ರೆಸ್ ನಾಯಕರು ಕಳುಹಿಸಿದ್ದ ಪಟ್ಟಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂಕಿತ ಹಾಕಿದ್ದಾರೆ. ಇಂದು ಸಂಜೆಯೊಳಗೆ ಪಟ್ಟಿ ಪ್ರಕಟವಾಗಲಿದೆ ಎಂಬ ಮಾಹಿತಿಗಳಿವೆ.
2-3ಕ್ಕಿಂತಲೂ ಹೆಚ್ಚು ಬಾರಿ ಗೆಲುವು ಸಾಸಿದ ಶಾಸಕರನ್ನು ಅದರಲ್ಲೂ ಹಿರಿಯರನ್ನು ನಿಗಮ ಮಂಡಳಿಗಳಿಗೆ ಪರಿಗಣಿಸಲಾಗಿದೆ. ವಿಧಾನಸಭೆಯ ಉಪಾಧ್ಯಕ್ಷ ಸ್ಥಾನವನ್ನು ನಿರಾಕರಿಸಿ ಎಡವಟ್ಟು ಮಾಡಿಕೊಂಡು ಚಾಮರಾಜನಗರದ ಪುಟ್ಟರಂಗಶೆಟ್ಟಿ, ಕಳೆದ ವಿಧಾನಸಭೆಯ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಕೆ.ಎಂ.ಶಿವಲಿಂಗೇಗೌಡ, ಕೃಷಿ ಸಚಿವ ಚೆಲುವರಾಯಸ್ವಾಮಿಯವರ ಆಪ್ತರಾಗಿರುವ ಬಂಡಿ ಸಿದ್ದನಗೌಡ, ಬಂಗಾರಪೇಟೆ ಕ್ಷೇತ್ರದ ಎಸ್.ಎನ್.ನಾರಾಯಣಸ್ವಾಮಿ, ಸಾಗರ ಕ್ಷೇತ್ರದ ಬೇಳೂರು ಗೋಪಾಲಕೃಷ್ಣ, ಭದ್ರಾವತಿಯ ಬಿ.ಕೆ.ಸಂಗಮೇಶ್, ಶೃಂಗೇರಿಯ ರಾಜೇಗೌಡ, ಬಿಳಗಿ ಕ್ಷೇತ್ರದ ಜೆ.ಟಿ.ಪಾಟೀಲ್, ಹಾನಗಲ್ನ ಶ್ರೀನಿವಾಸ್ ಮಾನೆ, ರಾಯಚೂರು ಗ್ರಾಮೀಣ ಕ್ಷೇತ್ರದ ಬಸನಗೌಡ ದದ್ದಲ್, ಚಳ್ಳಕೆರೆಯ ಟಿ.ರಘುಮೂರ್ತಿ, ಧಾರವಾಡದ ವಿನಯ್ ಕುಲಕರ್ಣಿ, ಮಾನ್ವಿಯ ಹಂಪಯ್ಯ ನಾಯ್ಕ, ಬೆಂಗಳೂರಿನ ಶಾಂತಿನಗರದ ಎನ್.ಎ.ಹ್ಯಾರಿಸ್, ಗೋವಿಂದರಾಜನಗರ ಕ್ಷೇತ್ರದ ಪ್ರಿಯಾಕೃಷ್ಣ ಸೇರಿದಂತೆ 36 ಕ್ಕೂ ಹೆಚ್ಚು ಮಂದಿ ಶಾಸಕರಿಗೆ ಮತ್ತು ಕೆಲವು ಜಿಲ್ಲಾಧ್ಯಕ್ಷರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ದೊರೆಯುವ ಸಾಧ್ಯತೆಯಿದೆ.
ಹಿರಿಯ ಶಾಸಕರ ಪೈಕಿ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಕರ್ನಾಟಕ ಗೃಹ ಮಂಡಳಿ, ನರೇಂದ್ರಸ್ವಾಮಿ ಅವರಿಗೆ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ, ಪುಟ್ಟರಂಗಶೆಟ್ಟಿ ಅವರಿಗೆ ಎಂಎಸ್ಐಎಲ್, ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಎನ್.ಎ.ಹ್ಯಾರಿಸ್ಗೆ ಬಿಡಿಎ, ಬೇಳೂರು ಗೋಪಾಲಕೃಷ್ಣ ಅವರಿಗೆ ಅರಣ್ಯ ಅಭಿವೃದ್ಧಿ ನಿಗಮ, ಬಸನಗೌಡ ದದ್ದಲ್ ಅವರಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ನಿಗಮಗಳನ್ನು ಹಂಚಿಕೆ ಮಾಡಲಾಗಿದೆ. ಇಂದು ಸಂಜೆಯೊಳಗಾಗಿ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಹೇಳಲಾಗುತ್ತಿದೆ